ಮಂಗಳವಾರ, ಆಗಸ್ಟ್ 14, 2012

ಬಾಲ್ಯದ ನೆನಪು


     ಎದುರಿಗಿದ್ದ ಕನ್ನಡಿಯಲ್ಲಿ ನನ್ನ ಮುಖ ನಾನು ನೋಡಿಕೊಂಡೆ. ನೋಡುತ್ತಿದ್ದ ಹಾಗೆ ನನ್ನ ಹಳೆಯ ಮುಖಗಳು ನೆನಪಿಗೆ ಬಂದವು. ಚಿಕ್ಕ ಮಗುವಿದ್ದಾಗ ಮಗುವಿಗೆ ದೃಷ್ಟಿಯಾಗದಿರಲಿ ಎಂದು ಕೆನ್ನೆಯ ಮೇಲೆ ದೃಷ್ಟಿಬೊಟ್ಟು ಇಡುತ್ತಿದ್ದ ಕಾಲದಲ್ಲಿ ತೆಗೆದಿದ್ದ ಫೋಟೋದಲ್ಲಿ ನಾನು ದುಂಡು ದುಂಡಗಿದ್ದೆ. ಬಿಳಿಯ ಸಫಾರಿ ಶೈಲಿಯ ಹೊಸ ಅಂಗಿ, ಚಡ್ಡಿ, ಕೈಗೆ ಫೋಟೋ ತೆಗೆಸುವ ಸಲುವಾಗಿ ಹಾಕಿದ್ದ ಸ್ಟೀಲ್ ಚೈನಿನ ವಾಚು (ಬಹುಷಃ ನಮ್ಮಪ್ಪನದೇ ಇರಬೇಕು), ನೀಟಾಗಿ ತಲೆ ಬಾಚಿ ಎರಡು ಜುಟ್ಟು ಹಾಕಿ ಮುಡಿಸಿದ ಹೂವು, ಹಣೆಯಲ್ಲಿ ದುಂಡಗೆ ಇಟ್ಟಿದ್ದ ಸಾದು, ಕ್ಯಾಮರಾ ಕಡೆಗೆ ದಿಟ್ಟಿಸಿದ್ದ ಕಣ್ಣುಗಳು, ಒಟ್ಟಾರೆಯಾಗಿ ನನ್ನ ಕಣ್ಣಿಗೆ ಸುಂದರವಾಗೇ ಕಾಣುತ್ತಿದೆ.

08-05-1953ರಲ್ಲಿ ತೆಗೆದಿದ್ದ ಫೋಟೋ - ಒಂದೂವರೆ ವರ್ಷದವನಿದ್ದಾಗ
      ಪ್ರಾಥಮಿಕ ಶಾಲಾದಿನಗಳಲ್ಲಿ ಶಾಲೆಯಲ್ಲಿ ಬುದ್ಧಿವಂತನೆಂದು ಕರೆಸಿಕೊಳ್ಳುತ್ತಿದ್ದೆ. ಸಾಮಾನ್ಯವಾಗಿ ಕ್ಲಾಸಿಗೆ ಮಾನಿಟರ್ ಆಗುತ್ತಿದ್ದರಿಂದ ನೋಡಲು ಸುಂದರವಾಗಿದ್ದಿರಬಹುದು. ಮೇಷ್ಟ್ರು, ಮೇಡಮ್ಮುಗಳಿಗೆ ವಿಧೇಯನಾಗಿರುತ್ತಿದ್ದರಿಂದಲೂ ಮಾನಿಟರ್ ಮಾಡುತ್ತಿದ್ದರೇನೋ! ಆ ಕಾಲದಲ್ಲಿ ಚಿಕ್ಕ ಹುಡುಗರಾದ ನಾವು ಬಾಹ್ಯ ಸುಂದರತೆಗೆ ಹೆಚ್ಚು ಗಮನ ಕೊಡುತ್ತಿರಲಿಲ್ಲವೆಂಬುದು ಸತ್ಯ ಸಂಗತಿ. ಆಟ ಆಡಿ ಕುಣಿದು ಕುಪ್ಪಳಿಸಿ ಮೈ,ಕೈ, ಬಟ್ಟೆಯೆಲ್ಲಾ ಕೊಳೆ ಮಾಡಿಕೊಂಡು ಮನೆಗೆ ಬಂದಾಗ ಅಮ್ಮ ಶುಚಿಗೊಳಿಸಿ ಬೇರೆ ಬಟ್ಟೆ ಹಾಕುತ್ತಿದ್ದಳು. ಆಗ ಈಗಿನಂತೆ ಸರಿಯಾದ ಅಳತೆಯ ಅಂಗಿ-ಚಡ್ಡಿಗಳನ್ನು ಹೊಲೆಸುತ್ತಿರಲಿಲ್ಲ. ಬೆಳೆಯುವ ವಯಸ್ಸೆಂದು ಸ್ವಲ್ಪ ದೊಡ್ಡ ಅಳತೆಯ ಬಟ್ಟೆಯನ್ನೇ ತರುತ್ತಿದ್ದರು. ಹೆಚ್ಚು ಸಮಯ ಬಾಳಿಕೆ ಬರಲಿ ಎಂಬ ಕಾರಣವೂ ಇತ್ತು. ಚಡ್ಡಿ ಬೀಳದಿರಲಿ ಎಂದು >< ಆಕಾರದ ಲಾಡಿಗಳು (ಹಿಂಭಾಗದಿಂದ ಭುಜದ ಮೇಲೆ ಹಾದು ಬಂದು ಮುಂಭಾಗದಲ್ಲಿನ ಲೂಪ್ ಅಥವ ಗುಂಡಿಗಳಿಗೆ ಸೇರಿಸುವ) ಇರುತ್ತಿದ್ದವು. ಅದು ಆಗ ಫ್ಯಾಷನ್ ಅನ್ನಿಸಿಕೊಳ್ಳುತ್ತಿತ್ತು. ತಲೆಯ ಕೂದಲು ಬೇಗ ಬೆಳೆದುಬಿಡುತ್ತದೆ ಎಂದು ವರ್ಷದ ಯಾವುದೇ ಕಾಲದಲ್ಲಿ ಸಮ್ಮರ್ ಕಟ್ ಮಾಡಿಸುತ್ತಿದ್ದರು. ತಿಂಗಳಲ್ಲಿ ೧೦-೧೫ ದಿನ ದಿನಗಳು ತಲೆ ಬಾಚುವ ಪ್ರಮೇಯವೇ ಬರುತ್ತಿರಲಿಲ್ಲ. ಆಗ ರೆಡಿಮೇಡ್ ಬಟ್ಟೆಗಳನ್ನು ಮೂಟೆಯ ಗಂಟಿನಲ್ಲಿ ಕಟ್ಟಿ ಹೊತ್ತು ಬೀದಿಯಲ್ಲಿ ಮಾರಲು ಬರುತ್ತಿದ್ದರು. ಒಂದು ರೂಪಾಯಿಗೆ ಒಂದು ಅಂಗಿ ಸಿಗುತ್ತಿತ್ತು. ಸಾಮಾನ್ಯವಾಗಿ ತೆಗೆದುಕೊಡುತ್ತಿದ್ದ ಅರ್ಧ ತೋಳಿನ ಬಣ್ಣ ಬಣ್ಣದ ಅಂಗಿ ಮತ್ತು ಚಡ್ಡಿಗಳನ್ನು ಸಂಭ್ರಮದಿಂದ ಧರಿಸಿ ಖುಷಿ ಪಡುತ್ತಿದ್ದೆವು. ಇನ್ನೊಂದು ವಿಷಯವೆಂದರೆ ಆಗ ಈಗಿನಂತೆ ಖಾಸಗಿ ಶಾಲೆಗಳು ಇರುತ್ತಿರಲಿಲ್ಲ. ಶ್ರೀಮಂತರು, ಬಡವರು ಎಲ್ಲರೂ ಸರ್ಕಾರಿ ಕನ್ನಡ ಶಾಲೆಗಳಿಗೇ ಮಕ್ಕಳನ್ನು ಕಳಿಸುತ್ತಿದ್ದರು. ೫ನೆಯ ತರಗತಿಯಿಂದ ಎ,ಬಿ,ಸಿ,ಡಿ ಕಲಿಸಲಾಗುತ್ತಿತ್ತು. ಶ್ರೀಮಂತರ ಮಕ್ಕಳು ಠಾಕು-ಠೀಕಾಗಿ ಬರುತ್ತಿದ್ದರೆ ಬಡ ಮಕ್ಕಳು ಹರಕಲು ಬಟ್ಟೆ ಹಾಕಿಕೊಂಡು, ಹರುಕು ಚೀಲದಲ್ಲಿ ಸ್ಲೇಟು-ಬಳಪ ತರುತ್ತಿದ್ದರು. ಮಧ್ಯಮ ವರ್ಗಕ್ಕೆ ಸೇರಿದ ನಮ್ಮಂತಹವರು ಎರಡು ವರ್ಗಗಳ ಮಕ್ಕಳಿಗೂ ಹೊಂದುತ್ತಿದ್ದೆವು.

06-10-1959ರಲ್ಲಿ 8ವರ್ಷದವನಿದ್ದಾಗ ತೆಗೆದ ಫೋಟೋ
     ನಮ್ಮಪ್ಪ ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ಅವರಿಗೆ ವರ್ಗಾವಣೆಯಾದಾಗಲೆಲ್ಲಾ ಗಂಟು ಮೂಟೆ ಕಟ್ಟಿಕೊಂಡು ವರ್ಗಾವಣೆಯಾದ ಊರಿಗೆ ಹೋಗುತ್ತಿದ್ದೆವು. ಹಾಗಾಗಿ ನನ್ನ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಚಿಕ್ಕಮಗಳೂರಿನಲ್ಲಿ, ಮಾಧ್ಯಮಿಕ ಶಾಲೆ ಭದ್ರಾವತಿಯಲ್ಲಿ, ಹೈಸ್ಕೂಲು ಚಿತ್ರದುರ್ಗದಲ್ಲಿ, ಪಿ.ಯು.ಸಿ. ಚಿಕ್ಕಮಗಳೂರಿನಲ್ಲಿ ಆಯಿತು. ನಂತರದಲ್ಲಿ ಅವರಿಗೆ ನರಸಿಂಹರಾಜಪುರಕ್ಕೆ ವರ್ಗವಾದ್ದರಿಂದ ಮತ್ತು ಅಲ್ಲಿ ಕಾಲೇಜು ಇರದಿದ್ದರಿಂದ ಹಾಸನದಲ್ಲಿ ಒಂದು ಬಾಡಿಗೆ ಕೋಣೆಯಲ್ಲಿದ್ದು ಬಿ.ಎಸ್.ಸಿ.ಡಿಗ್ರಿ ಮುಗಿಸಿದೆ. ಹೈಸ್ಕೂಲಿನಲ್ಲಿ ಓದುವಾಗಲೂ ಚಡ್ಡಿ ಧರಿಸುತ್ತಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಪ್ರಥಮನಾಗಿ ತೇರ್ಗಡೆಯಾದಾಗ ಚಿತ್ರದುರ್ಗದ ಪುರಸಭೆಯವರು (ನಾನು ಓದಿದ್ದು ಮುನಿಸಿಪಲ್ ಹೈಸ್ಕೂಲಿನಲ್ಲಿ) ನನಗೆ ಹಾರ ಹಾಕಿ ೫೦ ರೂಪಾಯಿ ಬಹುಮಾನ ಕೊಟ್ಟಿದ್ದರು. ಹೈಸ್ಕೂಲಿನಲ್ಲಿ ಶಾಲಾ ಪ್ರತಿನಿಧಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾನು ನನ್ನ ಪ್ರತಿಸ್ಪರ್ಧಿ ಅಶೋಕನಿಗಿಂತ ಕೇವಲ ಒಂದು ಮತ ಹೆಚ್ಚು ಪಡೆದು ಆಯ್ಕೆಯಾಗಿದ್ದೆ. ನನಗೆ ೫೦ ಮತಗಳು, ಅಶೋಕನಿಗೆ ೪೯ ಮತಗಳು ಬಂದಿದ್ದವು. ೧೨ ಮತಗಳು ಇಬ್ಬರಿಗೂ ಒಟ್ಟಿಗೆ ಹಾಕಲ್ಪಟ್ಟಿದ್ದರಿಂದ ಕುಲಗೆಟ್ಟಿದ್ದವು. ವಿಶೇಷವೆಂದರೆ ನಾನು ನನ್ನ ಮತವನ್ನು ಅಶೋಕನಿಗೆ ಮತ್ತು ಅಶೋಕ ತನ್ನ ಮತವನ್ನು ನನಗೆ ಹಾಕಿದ್ದ! ಆಗ ಕ್ರೀಡಾಮನೋಭಾವ ಹೊಂದಿದ್ದ ನಾವುಗಳು ಚುನಾವಣೆ ನಂತರವೂ ಸ್ನೇಹಿತರಾಗೇ ಇದ್ದೆವು. ಈಗ ಅವನು ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಗೊತ್ತಿಲ್ಲ, ಚಿತ್ರದುರ್ಗ ಬಿಟ್ಟನಂತರ ಪರಸ್ಪರ ಇಬ್ಬರಿಗೂ ಸಂಪರ್ಕವೇ ಆಗಲಿಲ್ಲ.
1965ರಲ್ಲಿ 14 ವರ್ಷದವನಿದ್ದಾಗ ಹೈಸ್ಕೂಲಿನಲ್ಲಿ 'ತ್ರಿಬ್ಬಲ್ ತಾಳಿ' ನಾಟಕವಾಡಿದಾಗ ತೆಗೆದದ್ದು; ಕುರ್ಚಿಯಲ್ಲಿ ಕುಳಿತ ಮೊದಲನೆಯವನು ಅಶೋಕ; ನಾನು ಯಾರು ಊಹಿಸಿ.

ಮಂಗಳವಾರ, ಜುಲೈ 31, 2012

ಸಾದ್ಯವಾದರೆ ಪ್ರೀತಿಸೋಣ



     ಒಂದು ಸಂದರ್ಭವನ್ನು ಊಹಿಸಿಕೊಳ್ಳೋಣ. ಒಂದು ದಂತವೈದ್ಯರ ಕ್ಲಿನಿಕ್‌ನಲ್ಲಿ ವೈದ್ಯರನ್ನು ಕಾಣಲು ರೋಗಿಗಳು ತಮ್ಮ ಸರತಿಗಾಗಿ ಕಾಯುತ್ತಿದ್ದಾರೆ. ನೋವಿನ ಬಾಧೆಯಿಂದ ಎಲ್ಲರೂ ಮುಖ ಕಿವುಚಿ ಕುಳಿತಿದ್ದಾರೆ. ನರಳಾಟ ಬಿಟ್ಟರೆ ಬೇರೆ ಭಾವವಿಲ್ಲ. ಆಗ ಒಬ್ಬ ತಾಯಿ ತನ್ನ ಹಲ್ಲು ನೋವಿನ ಚಿಕಿತ್ಸೆ ಸಲುವಾಗಿ ತನ್ನ ಪುಟ್ಟ ಮಗುವಿನೊಂದಿಗೆ ಅಲ್ಲಿಗೆ ಬಂದು ಸಾಲಿನಲ್ಲಿ ಕೂರುತ್ತಾಳೆ. ಆ ಮಗು ತನ್ನ ಪಕ್ಕ ಕುಳಿತ ವೃದ್ಧ ರೋಗಿಯನ್ನು ಕುತೂಹಲದಿಂದ ನೋಡುತ್ತಾ 'ತಾತಾ' ಎನ್ನುತ್ತದೆ. ಆತ ಮಗುವನ್ನೊಮ್ಮೆ ನೋಡಿ ಪಕ್ಕಕ್ಕೆ ಮುಖ ತಿರುಗಿಸಿ ನರಳುತ್ತಾನೆ. ಮಗು ತಾಯಿಯ ತೊಡೆಯಿಂದ ಬಲವಂತವಾಗಿ ಇಳಿದು ಆ ವ್ಯಕ್ತಿಯ ಹತ್ತಿರ ಹೋಗಿ ಆತನನ್ನು ಮುಟ್ಟಿ ಕತ್ತೆತ್ತಿ ನೋಡುತ್ತಾ ಮತ್ತೆ 'ತಾತಾ' ಎಂದು ನಗುತ್ತದೆ. ಆತನಿಗೆ ಮಗುವನ್ನು ಮಾತನಾಡಿಸದೆ ಇರಲು ಸಾಧ್ಯವೇ ಇಲ್ಲ. ಆತ ನಗುತ್ತಾ 'ಏನು ಮಗು?' ಅನ್ನುತ್ತಾನೆ. ಮಗು ಚಪ್ಪಾಳೆ ತಟ್ಟಿ ನಗುತ್ತದೆ. ಇದನ್ನು ಗಮನಿಸುತ್ತಿದ್ದ ಇತರರೂ ಮಗುವಿನ ನಗುಮುಖದಿಂದ ಆಕರ್ಷಿತರಾಗಿ ಅದನ್ನು ಮಾತನಾಡಿಸಲು ಪ್ರಾರಂಭಿಸುತ್ತಾರೆ. ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಹೋಗುತ್ತಾ ಆಟವಾಡಿಕೊಂಡಿದ್ದ ಮಗುವಿನಿಂದ ಹತ್ತೇ ನಿಮಿಷದಲ್ಲಿ ಅಲ್ಲಿನ ವಾತಾವರಣವೇ ಬದಲಾಗುತ್ತದೆ. ಮಗುವಿನೊಂದಿಗೆ ಮಾತನಾಡುತ್ತಿದ್ದಾಗ ಅವರುಗಳಿಗೆ ನೋವಿನ ಅನುಭವವೇ ಆಗುತ್ತಿರಲಿಲ್ಲ. ಒಂದು ಮಗುವಿನ ನಿಷ್ಕಲ್ಮಶ ನಗು ಮಾಡಿದ ಪರಿವರ್ತನೆ ಅದಾಗಿತ್ತು. ಆ ಮಗುವಿಗೆ ಸಾಧ್ಯವಾಗಿದ್ದು ದೊಡ್ಡವರಿಗೆ ಏಕೆ ಆಗುವುದಿಲ್ಲ? ಏಕೆಂದರೆ ಮಗುವಿಗೆ ಚಿಕ್ಕವರು, ದೊಡ್ಡವರು, ಬಡವ, ಶ್ರೀಮಂತ, ಆ ಜಾತಿ, ಈ ಜಾತಿ, ಕರಿಯ, ಬಿಳಿಯ, ಇತ್ಯಾದಿ ಬೇಧ ಭಾವವಿರುವುದಿಲ್ಲ. ಮಕ್ಕಳಂತೆ ನಿಷ್ಕಲ್ಮಶ ನಗು ದೊಡ್ಡವರಿಗೆ ಬರಲು ಕಷ್ಟ. ಆದರೆ ಸಾಧ್ಯವಾದಷ್ಟು ನಗುನಗುತ್ತಾ ಮಾತನಾಡುವ ವ್ಯಕ್ತಿಗಳು ಎಲ್ಲರಿಗೂ ಇಷ್ಟವಾಗುತ್ತಾರೆ.
*************
-ಕ.ವೆಂ.ನಾಗರಾಜ್.

ಭಾನುವಾರ, ಜುಲೈ 29, 2012

ಸೋಲದಿರು


ದೂಷಿಸದಿರು ಮನವೆ ಪರರು ಕಾರಣರಲ್ಲ
ನಿನ್ನೆಣಿಕೆ ತಪ್ಪಾಗಿ ಕಂಡಿರುವೆ ನೋವ |
ವಿಧಿಯು ಕಾರಣವಲ್ಲ ಹಣೆಬರಹ ಮೊದಲಲ್ಲ
ಕೊರಗಿದರೆ ಫಲವಿಲ್ಲ ದಣಿಯದಿರು ಮನವೆ ||


ಉಗ್ರವಾಗಿಹ ಮನವೆ ತಾಳು ತಾಳೆಲೆ ನೀನು
ವಿವೇಕ ನಲುಗೀತು ಕೆರಳದಿರು ತಾಳು |
ವ್ಯಗ್ರತೆಯ ನಿಗ್ರಹಿಸಿ ಸಮಚಿತ್ತದಲಿ ನಡೆಯೆ
ಸೋಲಿನ ಅನುಭವವೆ ಗೆಲುವಿಗಾಸರೆಯು ||


ಮೂಢನಂತಾಡದಿರು ಮತಿಗೆಟ್ಟು ನರಳದಿರು
ಮೈ ಕೊಡವಿ ಮೇಲೆದ್ದು ಅಡಿಯನಿಡು ಧೀರ |
ಸೋಲದಿರೆಲೆ ಜೀವ ಕಾಯ್ವ ನಮ್ಮನು ದೇವ
ಛಲಬಿಡದೆ ಮುನ್ನಡೆದು ಉಳಿಸು ಸ್ವಂತಿಕೆಯ ||


ಲೋಕದೊಪ್ಪಿಗೆ ಬೇಕೆ ಪರರ ಮನ್ನಣೆಯೇಕೆ
ದಾರಿ ಸರಿಯಿರುವಾಗ ಅಳುಕು ಅಂಜಿಕೆಯೇಕೆ |
ಒಳಮನವು ಒಪ್ಪಿರಲು ಚಂಚಲತೆ ಇನ್ನೇಕೆ
ಪಯಣಿಗನೆ ನೀ ಸಾಗು ದಾರಿ ನಿಚ್ಛಳವಿರಲು ||
***************
-ಕ.ವೆಂ.ನಾಗರಾಜ್.



ಶುಕ್ರವಾರ, ಜುಲೈ 27, 2012

ಮಕ್ಕಳಿಗೆ ಕಿವಿಮಾತು


ಬಾಳಸಂಜೆಯಲಿ ನಿಂತಿಹೆನು ನಾನಿಂದು
ಮನಸಿಟ್ಟು ಕೇಳಿರಿ ಹೇಳುವೆನು ಮಾತೊಂದು


ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು
ಅಂತರಾಳದ ನುಡಿಗಳಿವು ಹೃದಯದಲ್ಲಿದ್ದದ್ದು


ಗೊತ್ತಿಹುದು ನನಗೆ ರುಚಿಸಲಾರದು ನಿಮಗೆ
ಸಂಬಂಧ ಉಳಿಸುವ ಕಳಕಳಿಯ ಮಾತು


ಗೊತ್ತಿಹುದು ನನಗೆ ಪ್ರಿಯವಹುದು ನಿಮಗೆ
ಸಂಬಂಧ ಕೆಡಿಸುವ ಬಣ್ಣ ಬಣ್ಣದ ಮಾತು


ಹುಳುಕು ಹುಡುಕುವರೆಲ್ಲೆಲ್ಲು ವಿಷವನೆ ಕಕ್ಕುವರು
ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು


ದಾರಿಯದು ಸರಿಯಿರಲಿ ಅನೃತವನಾಡದಿರಿ
ತಪ್ಪೊಪ್ಪಿ ಸರಿನಡೆವ ಮನ ನಿಮಗೆ ಇರಲಿ


ಗೌರವಿಸಿ ಹಿರಿಯರ ಕಟುಮಾತನಾಡದಿರಿ
ಅಸಹಾಯಕರ ಶಾಪ ತಂದೀತು ಪರಿತಾಪ


ದೇವರನು ಅರಸದಿರಿ ಗುಡಿಗೋಪುರಗಳಲ್ಲಿ
ದೇವನಿಹನಿಲ್ಲಿ ನಮ್ಮ ಹೃದಯಮಂದಿರದಲ್ಲಿ


ಇಟ್ಟಿಗೆ ಕಲ್ಲುಗಳ ಜೋಡಿಸಲು ಕಟ್ಟಡವು
ಹೃದಯಗಳ ಜೋಡಿಸಿರಿ ಆಗುವುದು ಮನೆಯು


ಮಕ್ಕಳೇ ನಾ ನಂಬಿದಾ ತತ್ವ ಪಾಲಿಸುವಿರಾ?
ಬಾಳ ಪಯಣದ ಕೊನೆಗದುವೆನಗೆ ಸಂಸ್ಕಾರ
*************
-ಕ.ವೆಂ.ನಾಗರಾಜ್.

ಮಂಗಳವಾರ, ಜುಲೈ 24, 2012

ವಿಶೇಷ ರೀತಿಯ ಹುಟ್ಟು ಹಬ್ಬ

ದಿನಾಂಕ 22.7.2012ರ ಭಾನುವಾರ ನಮಗೆಲ್ಲಾ ಹಬ್ಬದ ವಾತಾವರಣ. ಎರಡು ಕಾರ್ಯಕ್ರಮಗಳು. ಎರಡರಲ್ಲೂ ತಿಪಟೂರು ಚಿನ್ಮಯ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಪಾಲುಗೊಂಡಿದ್ದು ನಮ್ಮೆಲ್ಲರ ಸಂತಸವನ್ನು ಇಮ್ಮಡಿಗೊಳಿಸಿತ್ತು. ಹಾಸನದಲ್ಲಿ ಆರಂಭವಾದ ಚಿನ್ಮಯ ಸತ್ಸಂಗದಎರಡನೇ ತಿಂಗಳ ಕಾರ್ಯಕ್ರಮ ಒಂದಾದರೆ, ಎರಡನೆಯದು ಬೆಂಗಳೂರಿನಲ್ಲಿರುವ ಮಗುವಿನ ಹುಟ್ಟುಹಬ್ಬವನ್ನು ಹಾಸನದ ವೃದ್ಧಾಶ್ರಮದಲ್ಲಿ ಆಚರಿಸಿದುದು!! ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜರದ್ದು ಯಾವಾಗಲೂ ವಿಶಿಷ್ಟವಾದ ಚಿಂತನೆ. ಬೆಂಗಳೂರಿನಲ್ಲಿರುವ ಮಗಳು ಬಿಂದು ಅಪ್ಪನಿಗೆ ಹೇಳಿದಳು,
"ಅಕ್ಷಯಳ ಹುಟ್ಟುಹಬ್ಬಕ್ಕೆ ಏನಾದರೂ ಒಂದಿಷ್ಟು ದಾನ ಕೊಡಬೇಕು, ಯಾವುದಾದರೂ ದೇವಸ್ಥಾನಕ್ಕೆ ಹಣ ಕೊಡೋಣ"
ನಾಗರಾಜ್ ಹೇಳಿದರು, "ನೋಡಮ್ಮಾ  ಜೀವಂತ ದೇವರಿಗೆ ಕೊಟ್ಟರೆ ಸಾರ್ಥಕ ವಾಗುತ್ತೆ!"
"ಏನು ಹಾಗಂದ್ರೆ?" ಮಗಳು ಕೇಳಿದಳು.
"ನೋಡು ಬಿಂದು, ಈ ಸಮಾಜದಲ್ಲಿ ಜನರು ಒಳ್ಳೆಯ ರೀತಿಯಲ್ಲಿಯಲ್ಲಾಗಲೀ, ಕೆಟ್ಟ ರೀತಿಯಲ್ಲಾಗಲೀ  ಬೇಕಾದಷ್ಟು ಹಣ ಮಾಡ್ತಾರೆ, ಸಾಮಾನ್ಯವಾಗಿ ತಾವು ಮಾಡಿದ ಪಾಪ ಹೋಗಿಬಿಡುತ್ತೆ, ಅನ್ನೋ ಭ್ರಮೆಯಲ್ಲಿ ದೇವಸ್ಥಾನಗಳಿಗೆ ಸಾಕಷ್ಟು ಹಣ ಕೊಡ್ತಾರೆ. ಹಾಗಾಗಿ ದೇವಸ್ಥಾನಗಳಿಗೆ ಹಣ ಕೊಡುವ ಜನರು ಸಮಾಜದಲ್ಲಿ ಸಾಕಷ್ಟು ಇದ್ದಾರೆ. ಅದರ ಬದಲು  ನಿನ್ನ ಮಗಳ ಹುಟ್ಟುಹಬ್ಬವನ್ನು ಯಾವುದಾದರೂ  ಅನಾಥಾಶ್ರಮದಲ್ಲೋ, ಅಥವಾ ವೃದ್ಧಾಶ್ರಮದಲ್ಲೋ  ಮಾಡೋಣ. ಅಲ್ಲಿನ ನಿವಾಸಿಗಳೊಡನೆ ಸಂತೋಷ ಹಂಚಿಕೊಳ್ಳೋಣ. ಅವರೆಲ್ಲಾ ಜೀವಂತ ದೇವರುಗಳು. ಈ ದೇವರುಗಳ ಮನಸ್ಸನ್ನು ಸ್ವಲ್ಪ ಸಂತೋಷ ಪಡಿಸಿದರೆ ಭಗವಂತ ಮೆಚ್ಚುತ್ತಾನೆ."
ತಂದೆಯ ಮಾತಿಗೆ ಮಗಳು,ಅಳಿಯ ಒಪ್ಪಿದರು. "ನೀವೇ ಏನು ಬೇಕಾದರೂ ಪ್ಲಾನ್ ಮಾಡಿ, ಹಣ  ನಮ್ಮದು, ಪ್ಲಾನ್ ನಿಮ್ಮದು" ಎಂದರು. ಸರಿ. ಯೋಜನೆ ರೂಪಿಸಿದ್ದಾಯ್ತು. ಹೇಗೂ   ನಮಗೆಲ್ಲಾ ಪರಿಚಿತರಾದ  ಡಾ. ಹೆಬ್ಬಾರ್  ವೃದ್ಧಾಶ್ರಮವನ್ನು ನಡೆಸುತ್ತಿದ್ದಾರೆ, ಮಳೆಗಾಲ ಬೇರೆ!  ಅಲ್ಲಿನ ನಿವಾಸಿಗಳಿಗೆ  ಬೆಚ್ಚಗಿನ ಸ್ವೆಟರ್ ಮತ್ತು ಟವೆಲುಗಳನ್ನು ಕೊಡಲು ತೀರ್ಮಾನಿಸಿ ಕಾರ್ಯಕ್ರಮ ನಿಶ್ಚಯ ಗೊಳಿಸಿದ್ದಾಯ್ತು. ದಿನಾಂಕ 22.7.2012 ರಂದು ಸತ್ಸಂಗ ನಡೆಸಲು ತಿಪಟೂರು ಚಿನ್ಮಯ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಬರುತ್ತಾರೆ, ಅವರಿಂದ ಅಲ್ಲೂ ಒಂದು ಸತ್ಸಂಗ ಮಾಡಿ  ಸ್ವೆಟರ್ ವಿತರಿಸಿ, ಎಲ್ಲರೊಡನೆ ಸಿಹಿ ಊಟಮಾಡಿಬರಲು ತೀರ್ಮಾನಿಸಿದೆವು.
     ಈಶಾವಾಸ್ಯಮ್ ನಲ್ಲಿ ಸಂಜೆ 6.00 ರಿಂದ 7.00 ರವರಗೆ ಸತ್ಸಂಗ ನಡೆದ ಕೂಡಲೇ ನಾಲ್ಕು ಕಾರುಗಳು ವೃದ್ಧಾಶ್ರಮತ್ತ ಹೊರಟವು. ವೃದ್ಧಾಶ್ರಮದಲ್ಲಿ ಕೆಲವು ಮಕ್ಕಳಿಗೂ  ಆಶ್ರಯ ಕೊಟ್ಟಿದ್ದಾರೆ. ಆ  ಮಕ್ಕಳಂತೂ ಕುಳಿದು ಕುಪ್ಪಳಿಸಿದವು. ಸುಧರ್ಮ ಚೈತನ್ಯರ ಸವಿಯಾದ ಮಾತುಗಳು, ಭಜನೆ, ಮಕ್ಕಳ ಒಡನಾಟದಿಂದ ಎಲ್ಲರೂ ಆನಂದ ಸಾಗರದಲ್ಲಿ ತೇಲಿದೆವು.  'ಅಕ್ಷಯಾ,  ನೀನು ನೂರ್ಕಾಲ ಬಾಳಮ್ಮಾ' ಎಂದು ಎಲ್ಲರೂ ಹರಸುತ್ತಾ ಬಿಂದು ಮತ್ತು  ಅವರ ಪತಿ ರಘು ಅವರ ಉದಾರತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಭಗವಂತನು  ಅವರ ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯವನ್ನು ದಯಪಾಲಿಸಲೆಂದು ಹರಸಿದೆವು. ಅಂತೂ  ಒಂದು ವಿಶೇಷ ಕಾರ್ಯಕ್ರಮವನ್ನು ರೂಪಿಸಿದ ಕೀರ್ತಿ ಕವಿನಾಗರಾಜರಿಗೂ ಮತ್ತು ಅವರ  ಪತ್ನಿ ಶ್ರೀಮತಿ ಭಾರತಿಯವರಿಗೂ ಸಲ್ಲುತ್ತದೆ. ವೇದಸುಧೆಯ ಓದುಗ ಮಿತ್ರರೂ ಕೂಡ  ತಮ್ಮ ಮನೆಯ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಈ ಆಶ್ರಮದಲ್ಲಿ ಆಚರಿಸಬಹುದೆಂದು ತಿಳಿಸುತ್ತಾ ಹೀಗೆ ಮುಂದೆ  ಬರುವ ಎಲ್ಲರಿಗೂ ತನ್ನ ಎಲ್ಲಾ ಸಹಕಾರವನ್ನೂ ನೀಡಲು ವೇದಸುಧೆ ಬಳಗ ಮತ್ತು ಹಾಸನದ ಚಿನ್ಮಯ ಸತ್ಸಂಗವು ಸಿದ್ಧವಿದೆ ಎಂದು ತಿಳಿಸಲು ಸಂತೋಷಿಸುತ್ತೇವೆ.
                    ವೃದ್ಧಾಶ್ರಮದಲ್ಲಿ ಒಟ್ಟು ಸುಮಾರು ಅರವತ್ತು ಜನ ನಿವಾಸಿಗಳಿದ್ದು  ಒಂದು ದಿನದ ಊಟೋಪಚಾರಕ್ಕೆ ಐದು ಸಾವಿರ ರೂಗಳನ್ನು ನಿಗದಿಪಡಿಸಿರುತ್ತಾರೆ. 

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದ ಬಂಧುಗಳ ನಡುವೆ

ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ

ಬೆಂಗಳೂರಿನಲ್ಲಿರುವ ಮೊಮ್ಮಗಳ ಹುಟ್ಟುಹಬ್ಬವನ್ನು 
 ಹಾಸನದ ವೃದ್ಧಾಶ್ರಮದಲ್ಲಿ ಆಚರಿಸುವಾಗ 
 ಕವಿ ನಾಗರಾಜ್  ತಮ್ಮನ್ನು ತಾವು ಮರೆತಿದ್ದರು.

ವೃದ್ಧಾಶ್ರಮದ ಮಕ್ಕಳೊಡನೆ ಹೆಚ್.ಎಸ್.ರಮೇಶ್


                                          

  

ಶ್ರೀ ಸುಧರ್ಮ ಚೈತನ್ಯರು ಸಾಂದರ್ಭಿಕವಾಗಿ ಆಡಿದ ಮಾತುಗಳನ್ನು ಇಲ್ಲಿ ಆಲಿಸಬಹುದು:


-ಹರಿಹರಪುರ ಶ್ರೀಧರ್.

ಶನಿವಾರ, ಜುಲೈ 21, 2012

ಸತ್ಸಂಗ - ಸತ್ಕಾರ್ಯ


ಆತ್ಮೀಯರೇ,
ದಿನಾಂಕ 22-07-2012 ರಂದು ಸಾಯಂಕಾಲ 7-15ಕ್ಕೆ ಸರಿಯಾಗಿ
ಹಾಸನದ ಗವೇನಹಳ್ಳಿಯಲ್ಲಿರುವ 
"ಚೈತನ್ಯ ಮಂದಿರ" (ವೃದ್ಧಾಶ್ರಮ)ದಲ್ಲಿ
ಸತ್ಸಂಗ ಏರ್ಪಡಿಸಿದೆ.

ಕಾರ್ಯಕ್ರಮ
ಭಜನೆ ಮತ್ತು ಉಪನ್ಯಾಸ: 
ಚಿನ್ಮಯ ಮಿಷನ್ನಿನ
ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯ ರವರಿಂದ

ಈ ಸಂದರ್ಭದಲ್ಲಿ ಬೆಂಗಳೂರಿನ
 ಶ್ರೀಮತಿ ಬಿಂದು ಮತ್ತು ಶ್ರೀ ಕೆ.ವಿ.ರಾಘವೇಂದ್ರ ಇವರು
ತಮ್ಮ ಮಗಳು ಮತ್ತು ನಮ್ಮ ಮೊಮ್ಮಗಳು
ಚಿ. ಅಕ್ಷಯಾಳ 6ನೆಯ ವರ್ಷದ ಹುಟ್ಟು ಹಬ್ಬದ ನಿಮಿತ್ತ 
ವೃದ್ಧಾಶ್ರಮದ ನಿವಾಸಿಗಳಿಗೆ ಸ್ವೆಟರುಗಳು ಮತ್ತು ಟವೆಲುಗಳನ್ನು ವಿತರಿಸುವರು.

ಡಾ. ಗುರುರಾಜ ಹೆಬ್ಬಾರರು ಸಮಾರಂಭದ ಅಧ್ಯಕ್ಷತೆ ವಹಿಸುವರು. 
ತಮಗೆ ಆದರದ ಸ್ವಾಗತ.

ಶ್ರೀಮತಿ ಭಾರತಿ ಮತ್ತು ಶ್ರೀ ಕ.ವೆಂ.ನಾಗರಾಜ್.

ಶುಭ ಕೋರುವ: 
ಶ್ರೀಮತಿ ಮಾನಸಾ ಮತ್ತು ಶ್ರೀ ಎನ್. ವಿನಯ

ನಾಗರ ಪಂಚಮಿ - ಪರಿಸರ ಪಂಚಮಿಯಾಗಲಿ




     ನಾಗರಪಂಚಮಿಯಂದು ನಾಗರನಿಗೆ ಹಾಲೆರೆದು, ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸುವ ಸಂಪ್ರದಾಯ ಚಾಲನೆಯಲ್ಲಿದೆ. ನಾಗರ ಪಂಚಮಿ ಆಚರಣೆ ಪರಂಪರೆಯಿಂದ ಮುಂದುವರೆಯಲು ಹಲವಾರು ಕಾರಣಗಳಿರಬಹುದು, ಅದಕ್ಕಾಗಿ ಹಲವಾರು ಪುರಾಣಕಥೆಗಳು ಇರಬಹುದು, ಹಲವಾರು ಕ್ಷೇತ್ರಗಳು ನಾಗಪೂಜೆಯ ಕಾರಣಕ್ಕೇ ಪ್ರಸಿದ್ಧವಾಗಿರುವುದೂ ಸತ್ಯ. ಎಲ್ಲಾ ಹಾವುಗಳನ್ನು ಪೂಜಿಸದೆ ನಾಗರವನ್ನೇ ಆಯ್ಕೆ ಮಾಡಿಕೊಳ್ಳಲು ಅದರ ಚುರುಕುತನ, ನಯನ ಮನೋಹರ ರೂಪ, ಹೊಂದಿರುವ ಭಯಂಕರ ವಿಷ ಹಾಗೂ ಭಯ ಸಹ ಕಾರಣವಾಗಿರಬಹುದು. ನಾಗರಹಾವನ್ನು ಕಾಮ ಹಾಗೂ ದ್ವೇಷಕ್ಕೆ ಸಂಕೇತವಾಗಿಯೂ ಬಳಸುತ್ತಿರುವುದು ವೇದ್ಯದ ಸಂಗತಿ.
     ನಾಗರಪಂಚಮಿಯ ಹಬ್ಬದಲ್ಲಿ ಕುಟುಂಬದವರು ಹಬ್ಬದ ಅಡಿಗೆ ಮಾಡಿ, ಹೊಸ ಬಟ್ಟೆಯುಟ್ಟು ಸಂಭ್ರಮಿಸುವುದು, ಸೋದರ-ಸೋದರಿಯರು ಬಾಂಧವ್ಯದ ಬೆಸುಗೆ ಗಟ್ಟಿ ಮಾಡಿಕೊಳ್ಳುವುದು ಒಳ್ಳೆಯದೇ. 'ನಾಗದೇವ'ನಿಗೆ ಸಂತುಷ್ಟಗೊಳಿಸಲು, ಅರಿತೋ, ಅರಿಯದೆಯೋ ತಪ್ಪಾಗಿದ್ದಲ್ಲಿ ತಮಗೆ ಕೇಡಾಗದಿರಲಿ ಎಂಬ ಬೇಡಿಕೆಗಾಗಿ, ಮಕ್ಕಳ ಭಾಗ್ಯ(?)ಕ್ಕಾಗಿ ನಾಗಪೂಜೆಯನ್ನು, ಪ್ರಾಯಶ್ಚಿತ್ತಕಾರ್ಯವನ್ನು ಹಬ್ಬದ ದಿನಗಳಲ್ಲದೆ ಇತರ ದಿನಗಳಲ್ಲೂ ಆಚರಿಸುವವರಿದ್ದಾರೆ.
     ಪ್ರಸ್ತುತ ಆಚರಣೆಯಲ್ಲಿರುವ ಹಾಲೆರೆಯುವ ಪದ್ಧತಿಯಿಂದ ನಾಗದೇವ ಸಂತುಷ್ಟಗೊಳ್ಳುವನೇ ಎಂಬ ಕುರಿತು ವಿಚಾರ ಮಾಡುವುದು ಒಳ್ಳೆಯದು. ಬಸವಣ್ಣನವರ ವಚನ "ಕಲ್ಲ ನಾಗರ ಕಂಡರೆ ಹಾಲನೆರೆವರಯ್ಯಾ, ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯಾ" ಎಂಬುದು ಮಾನವನ ಮನಸ್ಥಿತಿಗೆ ಹಿಡಿದ ಕೈಗನ್ನಡಿ. ಹಾವು ಹಾಲು ಕುಡಿಯುವುದೇ, ಒಂದು ವೇಳೆ ಕುಡಿದರೂ ಅದು ಇಷ್ಟವಾದ ಆಹಾರವೇ ಎಂಬುದು ಸಂದೇಹಾಸ್ಪದ. ಒಂದು ವೇಳೆ ಹಾಲು ಅದಕ್ಕೆ ಇಷ್ಟವಾದ ಆಹಾರವೆಂದೇ ಇಟ್ಟುಕೊಂಡರೂ ಹುತ್ತಕ್ಕೆ ಹಾಲೆರೆದರೆ ಉದ್ದೇಶ ಈಡೇರುವುದೇ? ಎರೆಯುವುದಾದರೆ ಹಾವಿಗೇ ಎರೆಯಲಿ. ವರ್ಷಕ್ಕೊಮ್ಮೆ ಹಾಲೆರೆದರೆ ಉಳಿದ ೩೬೪ ದಿನಗಳಲ್ಲಿ ಅದಕ್ಕೆ ಹಾಲು ಎಲ್ಲಿ ಸಿಗುತ್ತದೆ? ಯೋಚಿಸಬೇಕಾದ ವಿಷಯವಿದಲ್ಲವೇ? ಹಾವು ಹಾಲು ಕುಡಿಯುವುದೆಂದೇನೂ ಇಲ್ಲ. ಕುಡಿಯಲು ನೀರಿಲ್ಲದಿದ್ದರೆ, ಬಾಯಾರಿಕೆಯಾದರೆ ಕುಡಿಯುತ್ತದೆ. ಹಾಲನೆರೆಯುವ ಶೇ. 95ಕ್ಕೂ ಹೆಚ್ಚು ಜನರು ಹಬ್ಬದ ದಿನದಂದು ಹುತ್ತವನ್ನು ಹುಡುಕಿಕೊಂಡು ಹೋಗಿ ಹಾಲು ಎರೆಯುವರು. ಹುತ್ತಕ್ಕೆ ಹಾಲು ಹಾಕುವುದರಿಂದ ಹುತ್ತಕ್ಕೆ ಹಾನಿಯಾಗುತ್ತದೆ, ಅಲ್ಲಿರಬಹುದಾದ ಹಾವಿನ ಏಕಾಂತಕ್ಕೆ ಭಂಗವಾಗುತ್ತದೆ, ಹಿಂಸೆಯಾಗುತ್ತದೆ, ತೊಂದರೆ ಅನುಭವಿಸುತ್ತದೆಯಲ್ಲವೇ? ಹೀಗೆ ತೊಂದರೆ ಕೊಟ್ಟು 'ನಾಗದೇವ' ಸಂತುಷ್ಟನಾದನೆಂದು ಭಾವಿಸುವುದು ಎಷ್ಟರ ಮಟ್ಟಿಗೆ ಸರಿ? ಸಂಪ್ರದಾಯವಾದಿಗಳು 'ಎಷ್ಟೋ ಪ್ರಶ್ನೆಗಳಿಗೆ ಸಮಂಜಸ ಉತ್ತರ ಸಿಗಲಾರದು ಮತ್ತು ಎಷ್ಟೋ ವಿಷಯಗಳು ತರ್ಕಕ್ಕೆ ನಿಲುಕಲಾರವು' ಎಂದು ಹೇಳುತ್ತಾರಾದರೂ, ಇಂತಹ ಆಚರಣೆ ಕುರಿತು ಪ್ರಶ್ನೆ ಮಾಡಬಾರದು, ತರ್ಕ ಮಾಡಬಾರದು ಎಂಬ ಅವರ ವಾದ ಸರಿಯೆಂದು ತೋರುವುದಿಲ್ಲ. ಅಪ್ಪ ಹಾಕಿದ ಆಲದಮರವೆಂದು ನೇಣು ಹಾಕಿಕೊಳ್ಳಲು ಹೋಗದೆ ಅದರ ನೆರಳಿನಲ್ಲಿ ಬಾಳಬಹುದು. 


     ನಗರ ಪ್ರದೇಶಗಳಲ್ಲಂತೂ ಹಾವಿಗೆ ತಾವೇ ಇಲ್ಲ. ಹೊರವಲಯಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರ ಅವು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಅವುಗಳ ವಾಸಸ್ಥಾನಗಳನ್ನು ನಾಶಪಡಿಸಿ ಅವುಗಳ ಹೆಸರಿನಲ್ಲಿ ದೇವಸ್ಥಾನಗಳನ್ನು ಕಟ್ಟುತ್ತಿದ್ದಾನೆ ಮಾನವ! 


     ಉದ್ದೇಶ 'ನಾಗದೇವ'ನಿಗೆ ಸಂತುಷ್ಟಗೊಳಿಸಬೇಕು, ಆತನಿಂದ ತೊಂದರೆಯಾಗಬಾರದು ಎಂಬುದೇ ಆಗಿದ್ದಲ್ಲಿ ಹಬ್ಬವನ್ನು ಈರೀತಿ ಆಚರಿಸಬಹುದಲ್ಲವೇ?

೧. ಉರಗಗಳು ನೆಮ್ಮದಿಯಿಂದ ಬಾಳಲು ಅವಕಾಶ ಮಾಡಿಕೊಡಬೇಕು.
೨. ತಮಗೆ ತೊಂದರೆಯಾದಾಗ ಮತ್ತು ಭಯವಾದಾಗ ಮಾತ್ರ ಹಾವುಗಳು ಕಚ್ಚುತ್ತವೆ. ಇಲ್ಲದಿದ್ದಲ್ಲಿ ಅವುಗಳಿಂದ ತೊಂದರೆಯಿಲ್ಲ. ಇಲಿಗಳು, ಕೀಟಗಳನ್ನು ಭಕ್ಷಿಸುವ ಅವು ರೈತಮಿತ್ರರು. ಜನರಲ್ಲಿ ಉರಗಗಳ ಕುರಿತು ಜಾಗೃತಿ ಮೂಡಿಸುವುದಲ್ಲದೆ ಪರಿಸರ ಸಂರಕ್ಷಣೆಯ ಕಡೆಗೆ ಗಮನ ಕೊಡಬೇಕು.
೩. ಹುತ್ತಕ್ಕೆ ಹಾಲೆರೆಯುವ ಬದಲು ಕೆಲವು ವಿಚಾರವಂತ ಮಠಾಧೀಶರು ಮಾಡುತ್ತಿರುವಂತೆ ಮಕ್ಕಳಿಗೆ ಹಾಲು ಹಂಚಬಹುದು.
೪. ಹಾವು ಅಥವ ಪ್ರಾಣಿಗಳ ಚರ್ಮ ಸುಲಿದು ತಯಾರಿಸುವ ಬೆಲ್ಟು, ಇತ್ಯಾದಿಗಳನ್ನು ಕೊಳ್ಳಬಾರದು. ಹಾವು ಬದುಕಿದ್ದಂತೆಯೇ ಹಾವಿನ ಚರ್ಮ ಸುಲಿದು, ಒದ್ದಾಡುತ್ತಿರುವ ಹಾವಿನ ದೇಹವನ್ನು ಎಸೆದು ಹೋಗುವ ಕ್ರೂರಿಗಳ ಕಾರ್ಯಕ್ಕೆ ಇದರಿಂದ ಕಡಿವಾಣ ಹಾಕಬಹುದು.
೫. ಇಂತಹ ಇತರ ಸೂಕ್ತವೆನಿಸುವ ಕಾರ್ಯಗಳನ್ನು ಕೈಗೊಳ್ಳಬಹುದು.
ಇನ್ನು ಮುಂದಾದರೂ ನಾಗರ ಪಂಚಮಿಯನ್ನು 'ಪರಿಸರ ಪಂಚಮಿ'ಯಾಗಿ ಆಚರಿಸಲಿ ಎಂಬುದು ಈ 'ನಾಗರಾಜ'ನ ಆಶಯ!
*************
-ಕ.ವೆಂ.ನಾಗರಾಜ್.

ಗುರುವಾರ, ಜುಲೈ 19, 2012

ಹಕ್ಕಿಯೊಂದು ಹಾರಿ ಬಂದು. .


   


 

ಹಕ್ಕಿಯೊಂದು ಹಾರಿ ಬಂದು ಕಿಟಕಿಯಲ್ಲಿ ಕುಳಿತಿತು
ಸುತ್ತಮುತ್ತ ಹಾರಿತು ಅತ್ತ ಇತ್ತ ನೋಡಿತು |
ಸರಿಯೆಂದು ಕಂಡಿತು ಗೂಡನೊಂದು ಕಟ್ಟಿತು
ಕಾಲ ಕೂಡಿ ಬಂದಿತು ಮೊಟ್ಟೆ ಮೂರು ಇಟ್ಟಿತು ||




ಹಕ್ಕಿಗಾಗಿ ಕೋಣೆ ತೆರವು ಮನೆಮಂದಿಯಲ್ಲ ನೆರವು
ತಾಯಿಗಿಲ್ಲ ತಲೆಭಾರ ಜೀವಸೆಲೆಗೆ ಉಪಕಾರ |
ಬಿಟ್ಟ ಬಾಣದಂತೆ ಹಾರಿ ಬಂದವರನು ಹೆದರಿಸಿತು
ಕಾವಲಿದ್ದು ಕಾವು ಕೊಟ್ಟು ತಾಯಿತನವ ಮೆರೆಯಿತು||
 

ಮೊಟ್ಟೆ ಬಿರಿದು ಬೊಮ್ಮಟೆಗಳು ಬಂದವು
ತ್ರಾಣವಿಲ್ಲ ಕಾಣದೆಲ್ಲ ಕಿಚಿಪಿಚಿ ಕದಲಿದವು |
ನಾವು ತಾಳಲಾರೆವು ಅಮ್ಮ ಹಸಿವೆ ಅಮ್ಮ ಹಸಿವೆ
ಬಂದೆ ತಡಿ ಇಗೋ ಹಿಡಿ ಪ್ರೀತಿ ಎಲ್ಲ ಸುರಿವೆ ||


  

ಹಾ ಸರಿ ಹೀಗೆ ಮರಿ ಎಲ್ಲಿ ಹಾರು ನೋಡುವ
ಹಾರುವುದ ಕಲಿತ ಮೇಲೆ ಭರ್ ಎಂದು ಹಾರುವ|
ನಿಮ್ಮ ನೆರವು ನಮ್ಮ ನಲಿವು ಎನಿತು ಮಧುರ ಸಂಬಂಧ
ದ್ವೇಷ ಬಿಡಿ ಪ್ರೀತಿಸಿರಿ ಅನಿತು ಬಾಳು ಚೆಂದ ||


****************
-ಕ.ವೆಂ. ನಾಗರಾಜ್.
(ಆಧಾರ: ಶಿವಮೊಗ್ಗದ ದಿನಪತ್ರಿಕೆ 'ಜನಹೋರಾಟ'ದಲ್ಲಿ ಪ್ರಕಟವಾದ ಕವಿ ಸುರೇಶರ 'ಒಂದು ಗೂಡಿನ ಕಥೆ' ಎಂಬ ಸಚಿತ್ರ ಲೇಖನ;                                              ಚಿತ್ರಗಳು: ಬಿ.ಎಸ್.ಆರ್. ದೀಪಕ್.)