ವಿಚಾರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿಚಾರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶನಿವಾರ, ಜುಲೈ 6, 2013
ಮಂಗಳವಾರ, ಜುಲೈ 31, 2012
ಸಾದ್ಯವಾದರೆ ಪ್ರೀತಿಸೋಣ
ಒಂದು ಸಂದರ್ಭವನ್ನು ಊಹಿಸಿಕೊಳ್ಳೋಣ. ಒಂದು ದಂತವೈದ್ಯರ ಕ್ಲಿನಿಕ್‌ನಲ್ಲಿ ವೈದ್ಯರನ್ನು ಕಾಣಲು ರೋಗಿಗಳು ತಮ್ಮ ಸರತಿಗಾಗಿ ಕಾಯುತ್ತಿದ್ದಾರೆ. ನೋವಿನ ಬಾಧೆಯಿಂದ ಎಲ್ಲರೂ ಮುಖ ಕಿವುಚಿ ಕುಳಿತಿದ್ದಾರೆ. ನರಳಾಟ ಬಿಟ್ಟರೆ ಬೇರೆ ಭಾವವಿಲ್ಲ. ಆಗ ಒಬ್ಬ ತಾಯಿ ತನ್ನ ಹಲ್ಲು ನೋವಿನ ಚಿಕಿತ್ಸೆ ಸಲುವಾಗಿ ತನ್ನ ಪುಟ್ಟ ಮಗುವಿನೊಂದಿಗೆ ಅಲ್ಲಿಗೆ ಬಂದು ಸಾಲಿನಲ್ಲಿ ಕೂರುತ್ತಾಳೆ. ಆ ಮಗು ತನ್ನ ಪಕ್ಕ ಕುಳಿತ ವೃದ್ಧ ರೋಗಿಯನ್ನು ಕುತೂಹಲದಿಂದ ನೋಡುತ್ತಾ 'ತಾತಾ' ಎನ್ನುತ್ತದೆ. ಆತ ಮಗುವನ್ನೊಮ್ಮೆ ನೋಡಿ ಪಕ್ಕಕ್ಕೆ ಮುಖ ತಿರುಗಿಸಿ ನರಳುತ್ತಾನೆ. ಮಗು ತಾಯಿಯ ತೊಡೆಯಿಂದ ಬಲವಂತವಾಗಿ ಇಳಿದು ಆ ವ್ಯಕ್ತಿಯ ಹತ್ತಿರ ಹೋಗಿ ಆತನನ್ನು ಮುಟ್ಟಿ ಕತ್ತೆತ್ತಿ ನೋಡುತ್ತಾ ಮತ್ತೆ 'ತಾತಾ' ಎಂದು ನಗುತ್ತದೆ. ಆತನಿಗೆ ಮಗುವನ್ನು ಮಾತನಾಡಿಸದೆ ಇರಲು ಸಾಧ್ಯವೇ ಇಲ್ಲ. ಆತ ನಗುತ್ತಾ 'ಏನು ಮಗು?' ಅನ್ನುತ್ತಾನೆ. ಮಗು ಚಪ್ಪಾಳೆ ತಟ್ಟಿ ನಗುತ್ತದೆ. ಇದನ್ನು ಗಮನಿಸುತ್ತಿದ್ದ ಇತರರೂ ಮಗುವಿನ ನಗುಮುಖದಿಂದ ಆಕರ್ಷಿತರಾಗಿ ಅದನ್ನು ಮಾತನಾಡಿಸಲು ಪ್ರಾರಂಭಿಸುತ್ತಾರೆ. ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಹೋಗುತ್ತಾ ಆಟವಾಡಿಕೊಂಡಿದ್ದ ಮಗುವಿನಿಂದ ಹತ್ತೇ ನಿಮಿಷದಲ್ಲಿ ಅಲ್ಲಿನ ವಾತಾವರಣವೇ ಬದಲಾಗುತ್ತದೆ. ಮಗುವಿನೊಂದಿಗೆ ಮಾತನಾಡುತ್ತಿದ್ದಾಗ ಅವರುಗಳಿಗೆ ನೋವಿನ ಅನುಭವವೇ ಆಗುತ್ತಿರಲಿಲ್ಲ. ಒಂದು ಮಗುವಿನ ನಿಷ್ಕಲ್ಮಶ ನಗು ಮಾಡಿದ ಪರಿವರ್ತನೆ ಅದಾಗಿತ್ತು. ಆ ಮಗುವಿಗೆ ಸಾಧ್ಯವಾಗಿದ್ದು ದೊಡ್ಡವರಿಗೆ ಏಕೆ ಆಗುವುದಿಲ್ಲ? ಏಕೆಂದರೆ ಮಗುವಿಗೆ ಚಿಕ್ಕವರು, ದೊಡ್ಡವರು, ಬಡವ, ಶ್ರೀಮಂತ, ಆ ಜಾತಿ, ಈ ಜಾತಿ, ಕರಿಯ, ಬಿಳಿಯ, ಇತ್ಯಾದಿ ಬೇಧ ಭಾವವಿರುವುದಿಲ್ಲ. ಮಕ್ಕಳಂತೆ ನಿಷ್ಕಲ್ಮಶ ನಗು ದೊಡ್ಡವರಿಗೆ ಬರಲು ಕಷ್ಟ. ಆದರೆ ಸಾಧ್ಯವಾದಷ್ಟು ನಗುನಗುತ್ತಾ ಮಾತನಾಡುವ ವ್ಯಕ್ತಿಗಳು ಎಲ್ಲರಿಗೂ ಇಷ್ಟವಾಗುತ್ತಾರೆ.
*************
-ಕ.ವೆಂ.ನಾಗರಾಜ್.
ಶನಿವಾರ, ಜುಲೈ 21, 2012
ನಾಗರ ಪಂಚಮಿ - ಪರಿಸರ ಪಂಚಮಿಯಾಗಲಿ
ನಾಗರಪಂಚಮಿಯಂದು ನಾಗರನಿಗೆ ಹಾಲೆರೆದು, ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸುವ ಸಂಪ್ರದಾಯ ಚಾಲನೆಯಲ್ಲಿದೆ. ನಾಗರ ಪಂಚಮಿ ಆಚರಣೆ ಪರಂಪರೆಯಿಂದ ಮುಂದುವರೆಯಲು ಹಲವಾರು ಕಾರಣಗಳಿರಬಹುದು, ಅದಕ್ಕಾಗಿ ಹಲವಾರು ಪುರಾಣಕಥೆಗಳು ಇರಬಹುದು, ಹಲವಾರು ಕ್ಷೇತ್ರಗಳು ನಾಗಪೂಜೆಯ ಕಾರಣಕ್ಕೇ ಪ್ರಸಿದ್ಧವಾಗಿರುವುದೂ ಸತ್ಯ. ಎಲ್ಲಾ ಹಾವುಗಳನ್ನು ಪೂಜಿಸದೆ ನಾಗರವನ್ನೇ ಆಯ್ಕೆ ಮಾಡಿಕೊಳ್ಳಲು ಅದರ ಚುರುಕುತನ, ನಯನ ಮನೋಹರ ರೂಪ, ಹೊಂದಿರುವ ಭಯಂಕರ ವಿಷ ಹಾಗೂ ಭಯ ಸಹ ಕಾರಣವಾಗಿರಬಹುದು. ನಾಗರಹಾವನ್ನು ಕಾಮ ಹಾಗೂ ದ್ವೇಷಕ್ಕೆ ಸಂಕೇತವಾಗಿಯೂ ಬಳಸುತ್ತಿರುವುದು ವೇದ್ಯದ ಸಂಗತಿ.
ನಾಗರಪಂಚಮಿಯ ಹಬ್ಬದಲ್ಲಿ ಕುಟುಂಬದವರು ಹಬ್ಬದ ಅಡಿಗೆ ಮಾಡಿ, ಹೊಸ ಬಟ್ಟೆಯುಟ್ಟು ಸಂಭ್ರಮಿಸುವುದು, ಸೋದರ-ಸೋದರಿಯರು ಬಾಂಧವ್ಯದ ಬೆಸುಗೆ ಗಟ್ಟಿ ಮಾಡಿಕೊಳ್ಳುವುದು ಒಳ್ಳೆಯದೇ. 'ನಾಗದೇವ'ನಿಗೆ ಸಂತುಷ್ಟಗೊಳಿಸಲು, ಅರಿತೋ, ಅರಿಯದೆಯೋ ತಪ್ಪಾಗಿದ್ದಲ್ಲಿ ತಮಗೆ ಕೇಡಾಗದಿರಲಿ ಎಂಬ ಬೇಡಿಕೆಗಾಗಿ, ಮಕ್ಕಳ ಭಾಗ್ಯ(?)ಕ್ಕಾಗಿ ನಾಗಪೂಜೆಯನ್ನು, ಪ್ರಾಯಶ್ಚಿತ್ತಕಾರ್ಯವನ್ನು ಹಬ್ಬದ ದಿನಗಳಲ್ಲದೆ ಇತರ ದಿನಗಳಲ್ಲೂ ಆಚರಿಸುವವರಿದ್ದಾರೆ.
ಪ್ರಸ್ತುತ ಆಚರಣೆಯಲ್ಲಿರುವ ಹಾಲೆರೆಯುವ ಪದ್ಧತಿಯಿಂದ ನಾಗದೇವ ಸಂತುಷ್ಟಗೊಳ್ಳುವನೇ ಎಂಬ ಕುರಿತು ವಿಚಾರ ಮಾಡುವುದು ಒಳ್ಳೆಯದು. ಬಸವಣ್ಣನವರ ವಚನ "ಕಲ್ಲ ನಾಗರ ಕಂಡರೆ ಹಾಲನೆರೆವರಯ್ಯಾ, ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯಾ" ಎಂಬುದು ಮಾನವನ ಮನಸ್ಥಿತಿಗೆ ಹಿಡಿದ ಕೈಗನ್ನಡಿ. ಹಾವು ಹಾಲು ಕುಡಿಯುವುದೇ, ಒಂದು ವೇಳೆ ಕುಡಿದರೂ ಅದು ಇಷ್ಟವಾದ ಆಹಾರವೇ ಎಂಬುದು ಸಂದೇಹಾಸ್ಪದ. ಒಂದು ವೇಳೆ ಹಾಲು ಅದಕ್ಕೆ ಇಷ್ಟವಾದ ಆಹಾರವೆಂದೇ ಇಟ್ಟುಕೊಂಡರೂ ಹುತ್ತಕ್ಕೆ ಹಾಲೆರೆದರೆ ಉದ್ದೇಶ ಈಡೇರುವುದೇ? ಎರೆಯುವುದಾದರೆ ಹಾವಿಗೇ ಎರೆಯಲಿ. ವರ್ಷಕ್ಕೊಮ್ಮೆ ಹಾಲೆರೆದರೆ ಉಳಿದ ೩೬೪ ದಿನಗಳಲ್ಲಿ ಅದಕ್ಕೆ ಹಾಲು ಎಲ್ಲಿ ಸಿಗುತ್ತದೆ? ಯೋಚಿಸಬೇಕಾದ ವಿಷಯವಿದಲ್ಲವೇ? ಹಾವು ಹಾಲು ಕುಡಿಯುವುದೆಂದೇನೂ ಇಲ್ಲ. ಕುಡಿಯಲು ನೀರಿಲ್ಲದಿದ್ದರೆ, ಬಾಯಾರಿಕೆಯಾದರೆ ಕುಡಿಯುತ್ತದೆ. ಹಾಲನೆರೆಯುವ ಶೇ. 95ಕ್ಕೂ ಹೆಚ್ಚು ಜನರು ಹಬ್ಬದ ದಿನದಂದು ಹುತ್ತವನ್ನು ಹುಡುಕಿಕೊಂಡು ಹೋಗಿ ಹಾಲು ಎರೆಯುವರು. ಹುತ್ತಕ್ಕೆ ಹಾಲು ಹಾಕುವುದರಿಂದ ಹುತ್ತಕ್ಕೆ ಹಾನಿಯಾಗುತ್ತದೆ, ಅಲ್ಲಿರಬಹುದಾದ ಹಾವಿನ ಏಕಾಂತಕ್ಕೆ ಭಂಗವಾಗುತ್ತದೆ, ಹಿಂಸೆಯಾಗುತ್ತದೆ, ತೊಂದರೆ ಅನುಭವಿಸುತ್ತದೆಯಲ್ಲವೇ? ಹೀಗೆ ತೊಂದರೆ ಕೊಟ್ಟು 'ನಾಗದೇವ' ಸಂತುಷ್ಟನಾದನೆಂದು ಭಾವಿಸುವುದು ಎಷ್ಟರ ಮಟ್ಟಿಗೆ ಸರಿ? ಸಂಪ್ರದಾಯವಾದಿಗಳು 'ಎಷ್ಟೋ ಪ್ರಶ್ನೆಗಳಿಗೆ ಸಮಂಜಸ ಉತ್ತರ ಸಿಗಲಾರದು ಮತ್ತು ಎಷ್ಟೋ ವಿಷಯಗಳು ತರ್ಕಕ್ಕೆ ನಿಲುಕಲಾರವು' ಎಂದು ಹೇಳುತ್ತಾರಾದರೂ, ಇಂತಹ ಆಚರಣೆ ಕುರಿತು ಪ್ರಶ್ನೆ ಮಾಡಬಾರದು, ತರ್ಕ ಮಾಡಬಾರದು ಎಂಬ ಅವರ ವಾದ ಸರಿಯೆಂದು ತೋರುವುದಿಲ್ಲ. ಅಪ್ಪ ಹಾಕಿದ ಆಲದಮರವೆಂದು ನೇಣು ಹಾಕಿಕೊಳ್ಳಲು ಹೋಗದೆ ಅದರ ನೆರಳಿನಲ್ಲಿ ಬಾಳಬಹುದು.
ನಗರ ಪ್ರದೇಶಗಳಲ್ಲಂತೂ ಹಾವಿಗೆ ತಾವೇ ಇಲ್ಲ. ಹೊರವಲಯಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರ ಅವು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಅವುಗಳ ವಾಸಸ್ಥಾನಗಳನ್ನು ನಾಶಪಡಿಸಿ ಅವುಗಳ ಹೆಸರಿನಲ್ಲಿ ದೇವಸ್ಥಾನಗಳನ್ನು ಕಟ್ಟುತ್ತಿದ್ದಾನೆ ಮಾನವ!
ಉದ್ದೇಶ 'ನಾಗದೇವ'ನಿಗೆ ಸಂತುಷ್ಟಗೊಳಿಸಬೇಕು, ಆತನಿಂದ ತೊಂದರೆಯಾಗಬಾರದು ಎಂಬುದೇ ಆಗಿದ್ದಲ್ಲಿ ಹಬ್ಬವನ್ನು ಈರೀತಿ ಆಚರಿಸಬಹುದಲ್ಲವೇ?
ನಗರ ಪ್ರದೇಶಗಳಲ್ಲಂತೂ ಹಾವಿಗೆ ತಾವೇ ಇಲ್ಲ. ಹೊರವಲಯಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರ ಅವು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಅವುಗಳ ವಾಸಸ್ಥಾನಗಳನ್ನು ನಾಶಪಡಿಸಿ ಅವುಗಳ ಹೆಸರಿನಲ್ಲಿ ದೇವಸ್ಥಾನಗಳನ್ನು ಕಟ್ಟುತ್ತಿದ್ದಾನೆ ಮಾನವ!
ಉದ್ದೇಶ 'ನಾಗದೇವ'ನಿಗೆ ಸಂತುಷ್ಟಗೊಳಿಸಬೇಕು, ಆತನಿಂದ ತೊಂದರೆಯಾಗಬಾರದು ಎಂಬುದೇ ಆಗಿದ್ದಲ್ಲಿ ಹಬ್ಬವನ್ನು ಈರೀತಿ ಆಚರಿಸಬಹುದಲ್ಲವೇ?
೧. ಉರಗಗಳು ನೆಮ್ಮದಿಯಿಂದ ಬಾಳಲು ಅವಕಾಶ ಮಾಡಿಕೊಡಬೇಕು.
೨. ತಮಗೆ ತೊಂದರೆಯಾದಾಗ ಮತ್ತು ಭಯವಾದಾಗ ಮಾತ್ರ ಹಾವುಗಳು ಕಚ್ಚುತ್ತವೆ. ಇಲ್ಲದಿದ್ದಲ್ಲಿ ಅವುಗಳಿಂದ ತೊಂದರೆಯಿಲ್ಲ. ಇಲಿಗಳು, ಕೀಟಗಳನ್ನು ಭಕ್ಷಿಸುವ ಅವು ರೈತಮಿತ್ರರು. ಜನರಲ್ಲಿ ಉರಗಗಳ ಕುರಿತು ಜಾಗೃತಿ ಮೂಡಿಸುವುದಲ್ಲದೆ ಪರಿಸರ ಸಂರಕ್ಷಣೆಯ ಕಡೆಗೆ ಗಮನ ಕೊಡಬೇಕು.
೩. ಹುತ್ತಕ್ಕೆ ಹಾಲೆರೆಯುವ ಬದಲು ಕೆಲವು ವಿಚಾರವಂತ ಮಠಾಧೀಶರು ಮಾಡುತ್ತಿರುವಂತೆ ಮಕ್ಕಳಿಗೆ ಹಾಲು ಹಂಚಬಹುದು.
೪. ಹಾವು ಅಥವ ಪ್ರಾಣಿಗಳ ಚರ್ಮ ಸುಲಿದು ತಯಾರಿಸುವ ಬೆಲ್ಟು, ಇತ್ಯಾದಿಗಳನ್ನು ಕೊಳ್ಳಬಾರದು. ಹಾವು ಬದುಕಿದ್ದಂತೆಯೇ ಹಾವಿನ ಚರ್ಮ ಸುಲಿದು, ಒದ್ದಾಡುತ್ತಿರುವ ಹಾವಿನ ದೇಹವನ್ನು ಎಸೆದು ಹೋಗುವ ಕ್ರೂರಿಗಳ ಕಾರ್ಯಕ್ಕೆ ಇದರಿಂದ ಕಡಿವಾಣ ಹಾಕಬಹುದು.
೫. ಇಂತಹ ಇತರ ಸೂಕ್ತವೆನಿಸುವ ಕಾರ್ಯಗಳನ್ನು ಕೈಗೊಳ್ಳಬಹುದು.
ಇನ್ನು ಮುಂದಾದರೂ ನಾಗರ ಪಂಚಮಿಯನ್ನು 'ಪರಿಸರ ಪಂಚಮಿ'ಯಾಗಿ ಆಚರಿಸಲಿ ಎಂಬುದು ಈ 'ನಾಗರಾಜ'ನ ಆಶಯ!
*************
-ಕ.ವೆಂ.ನಾಗರಾಜ್.
ಭಾನುವಾರ, ಜುಲೈ 15, 2012
ಮಕ್ಕಳ ಜನ್ಮ ದಿನ - ಹೀಗೊಂದು ಬದಲಾವಣೆ ಬರಲಿ
ಚಿನ್ಮಯ ಮಿಷನ್ ವತಿಯಿಂದ ಏರ್ಪಡಿಸಿದ್ದ ಉಪನ್ಯಾಸವೊಂದರ ಸಂದರ್ಭದಲ್ಲಿ ಹಂಚಲಾದ ಕರಪತ್ರದಲ್ಲಿ 'ಜನ್ಮದಿನದ ಗೀತೆ' ಎಂದು ಈ ಕೆಳಗೆ ತಿಳಿಸಿರುವದನ್ನು ಪ್ರಕಟಿಸಲಾಗಿತ್ತು. ಮಕ್ಕಳ ಜನ್ಮದಿನದಂದು ಇದನ್ನು ಹಾಡಬಹುದೆಂದು ಸೂಚಿಸಲಾಗಿತ್ತು.
ಜನ್ಮದಿನಮಿದಂ ಅಯಿ ಪ್ರಿಯ ಸಖೇ
ಶಂ ತನೋತು ತೇ ಸರ್ವದಾ ಮುದಂ
ಪ್ರಾರ್ಥಯಾಮಹೇ ಭವ ಶತಾಯುಷೀ
ಈಶ್ವರಸ್ಸದಾ ತ್ವಾಂ ರಕ್ಷತು
ಪುಣ್ಯಕರ್ಮಣಾ ಕೀರ್ತಿಮರ್ಜಯ
ಜೀವನಂ ತವ ಭವತು ಸಾರ್ಥಕಂ
'ಹ್ಯಾಪಿ ಬರ್ತ್ ಡೇ ಟು ಯೂ' ಎಂದು ಹಾಡುವ ಅಂಧಾನುಕರಣೆ ಬೆಳೆಸಿಕೊಂಡಿರುವ ನಾವು ಮಕ್ಕಳಿಗೆ ಎಷ್ಟು ವಯಸ್ಸಾಗಿದೆಯೋ ಅಷ್ಟು ಮೇಣದ ಬತ್ತಿಗಳನ್ನು ಹಚ್ಚಿ ಕೇಕಿನ ಮೇಲೆ ಇಟ್ಟು ಉಫ್ ಎಂದು ಆರಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಆಲೋಚಿಸಬೇಡವೇ? ಮೇಣದ ಬತ್ತಿಗಳನ್ನು ಆರಿಸುವುದರ ಸಂಕೇತ ಬಹುಷಃ ಇಷ್ಟು ವರ್ಷ ಕಳೆಯಿತು ಎಂದಿರಬಹುದೇ? ಬದಲಾಗಿ ಮಕ್ಕಳಿಗೆ ತೈಲದ ಅಭ್ಯಂಜನ ಮಾಡಿಸಿ ಹೊಸ ಬಟ್ಟೆ ಹಾಕಿ ಶೃಂಗರಿಸಿ ಹಬ್ಬದ ಅಡಿಗೆ ಮಾಡಿ ಮನೆ ಮಂದಿ ಸಂಭ್ರಮಿಸಬಹುದಲ್ಲವೇ? ಜ್ಯೋತಿ ಆರಿಸುವ ಬದಲಿಗೆ ಮಗುವಿನ ಕೈಯಲ್ಲೇ ದೀಪ ಬೆಳಗಿಸಬಹುದು. ನೆಂಟರಿಷ್ಟರು, ಸ್ನೇಹಿತರು, ಓರಗೆಯ ಮಕ್ಕಳನ್ನು ಆಹ್ವಾನಿಸಿ ಸಾಯಂಕಾಲದಲ್ಲಿ ಮಗುವಿಗೆ ಆರತಿ ಮಾಡಿ ಸಿಹಿ ಹಂಚಬಹುದು. ಹ್ಯಾಪಿ ಬರ್ತ್ ಡೇ ಹಾಡುವ ಬದಲಿಗೆ ಸಂಸ್ಕೃತದ ಮೇಲೆ ತಿಳಿಸಿದ ಹಾಡನ್ನಾಗಲೀ ಅಥವ ಕನ್ನಡದ ಈ ಕೆಳಕಂಡ ಹಾಡನ್ನಾಗಲೀ ಹಾಡಬಹುದಲ್ಲವೇ? (ಮೇಲಿನ ಹಾಡಿನ ಸ್ಫೂರ್ತಿಯಿಂದ ಇದನ್ನು ರಚಿಸಿದೆ).
ಪುಟ್ಟ ಗೌರಿಗೆ . . ಜನ್ಮದಿನವಿದು|
ಬಾಳ ತೇರಿಗೆ . . ನವ್ಯ ನಡೆಯಿದು ||
ದೇವ ಕಾಯಲಿ . . ಆಯು ನೀಡಲಿ|
ಜನರು ಹರಸಲಿ . . ಬಾಳು ಬೆಳಗಲಿ ||
ಸತ್ಯಧರ್ಮದಿ . . ಸಕಲಸಂಪದ|
ಶಾಂತಿ ನೆಮ್ಮದಿ . . ಸುಖವ ನೀಪಡಿ ||
ಪುಟ್ಟ ಗೌರಿಗೆ . . ಜನ್ಮದಿನವಿದು|
ಬಾಳ ತೇರಿಗೆ . . ನವ್ಯ ನಡೆಯಿದು ||
(ಪುಟ್ಟ ಗೌರಿ ಎಂಬ ಸ್ಥಳದಲ್ಲಿ ಸಂಬಂಧಿಸಿದ ಮಗುವಿನ ಹೆಸರು ಸೇರಿಸಿ ಹಾಡಬಹುದು).
ಈ ಸಂಭ್ರಮವನ್ನು ಬಡ ಮತ್ತು ಅನಾಥ ಮಕ್ಕಳಿಗೆ ಊಟೋಪಚಾರ ಮಾಡುವ ಮೂಲಕ ಅಥವಾ ಉತ್ತಮವಾದ ಸಮಾಜಕಾರ್ಯದಲ್ಲಿ ತೊಡಗಿರುವ ಸೇವಾ ಸಂಸ್ಥೆಗೆ ಧನ ಸಹಾಯ ಮಾಡುವ ಮೂಲಕವೂ ಆಚರಿಸಬಹುದು. ಮಗುವಿನ ಕೈಯಲ್ಲೇ ಇದನ್ನು ಮಾಡಿಸಿದರೆ ಮಗುವಿಗೆ ಸತ್ ಸಂಸ್ಕಾರ ನೀಡಿದಂತೆಯೂ ಆಗುವುದು. ಸಹೃದಯರು ಈ ಬಗ್ಗೆ ಚಿಂತಿಸಿ ಕಾರ್ಯ ಪ್ರವೃತ್ತರಾಗಬಹುದಲ್ಲವೇ?
************
-ಕ.ವೆಂ.ನಾಗರಾಜ್.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)



