ಸ್ಮರಣೀಯ ಸಂಗತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸ್ಮರಣೀಯ ಸಂಗತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬುಧವಾರ, ಸೆಪ್ಟೆಂಬರ್ 18, 2013
ಮಂಗಳವಾರ, ಜುಲೈ 24, 2012
ವಿಶೇಷ ರೀತಿಯ ಹುಟ್ಟು ಹಬ್ಬ
ದಿನಾಂಕ 22.7.2012ರ ಭಾನುವಾರ ನಮಗೆಲ್ಲಾ ಹಬ್ಬದ ವಾತಾವರಣ. ಎರಡು ಕಾರ್ಯಕ್ರಮಗಳು. ಎರಡರಲ್ಲೂ ತಿಪಟೂರು ಚಿನ್ಮಯ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಪಾಲುಗೊಂಡಿದ್ದು ನಮ್ಮೆಲ್ಲರ ಸಂತಸವನ್ನು ಇಮ್ಮಡಿಗೊಳಿಸಿತ್ತು. ಹಾಸನದಲ್ಲಿ ಆರಂಭವಾದ ಚಿನ್ಮಯ ಸತ್ಸಂಗದಎರಡನೇ ತಿಂಗಳ ಕಾರ್ಯಕ್ರಮ ಒಂದಾದರೆ, ಎರಡನೆಯದು ಬೆಂಗಳೂರಿನಲ್ಲಿರುವ ಮಗುವಿನ ಹುಟ್ಟುಹಬ್ಬವನ್ನು ಹಾಸನದ ವೃದ್ಧಾಶ್ರಮದಲ್ಲಿ ಆಚರಿಸಿದುದು!! ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜರದ್ದು ಯಾವಾಗಲೂ ವಿಶಿಷ್ಟವಾದ ಚಿಂತನೆ. ಬೆಂಗಳೂರಿನಲ್ಲಿರುವ ಮಗಳು ಬಿಂದು ಅಪ್ಪನಿಗೆ ಹೇಳಿದಳು,
"ಅಕ್ಷಯಳ ಹುಟ್ಟುಹಬ್ಬಕ್ಕೆ ಏನಾದರೂ ಒಂದಿಷ್ಟು ದಾನ ಕೊಡಬೇಕು, ಯಾವುದಾದರೂ ದೇವಸ್ಥಾನಕ್ಕೆ ಹಣ ಕೊಡೋಣ"
"ಅಕ್ಷಯಳ ಹುಟ್ಟುಹಬ್ಬಕ್ಕೆ ಏನಾದರೂ ಒಂದಿಷ್ಟು ದಾನ ಕೊಡಬೇಕು, ಯಾವುದಾದರೂ ದೇವಸ್ಥಾನಕ್ಕೆ ಹಣ ಕೊಡೋಣ"
ನಾಗರಾಜ್ ಹೇಳಿದರು, "ನೋಡಮ್ಮಾ ಜೀವಂತ ದೇವರಿಗೆ ಕೊಟ್ಟರೆ ಸಾರ್ಥಕ ವಾಗುತ್ತೆ!"
"ಏನು ಹಾಗಂದ್ರೆ?" ಮಗಳು ಕೇಳಿದಳು.
"ನೋಡು ಬಿಂದು, ಈ ಸಮಾಜದಲ್ಲಿ ಜನರು ಒಳ್ಳೆಯ ರೀತಿಯಲ್ಲಿಯಲ್ಲಾಗಲೀ, ಕೆಟ್ಟ ರೀತಿಯಲ್ಲಾಗಲೀ ಬೇಕಾದಷ್ಟು ಹಣ ಮಾಡ್ತಾರೆ, ಸಾಮಾನ್ಯವಾಗಿ ತಾವು ಮಾಡಿದ ಪಾಪ ಹೋಗಿಬಿಡುತ್ತೆ, ಅನ್ನೋ ಭ್ರಮೆಯಲ್ಲಿ ದೇವಸ್ಥಾನಗಳಿಗೆ ಸಾಕಷ್ಟು ಹಣ ಕೊಡ್ತಾರೆ. ಹಾಗಾಗಿ ದೇವಸ್ಥಾನಗಳಿಗೆ ಹಣ ಕೊಡುವ ಜನರು ಸಮಾಜದಲ್ಲಿ ಸಾಕಷ್ಟು ಇದ್ದಾರೆ. ಅದರ ಬದಲು ನಿನ್ನ ಮಗಳ ಹುಟ್ಟುಹಬ್ಬವನ್ನು ಯಾವುದಾದರೂ ಅನಾಥಾಶ್ರಮದಲ್ಲೋ, ಅಥವಾ ವೃದ್ಧಾಶ್ರಮದಲ್ಲೋ ಮಾಡೋಣ. ಅಲ್ಲಿನ ನಿವಾಸಿಗಳೊಡನೆ ಸಂತೋಷ ಹಂಚಿಕೊಳ್ಳೋಣ. ಅವರೆಲ್ಲಾ ಜೀವಂತ ದೇವರುಗಳು. ಈ ದೇವರುಗಳ ಮನಸ್ಸನ್ನು ಸ್ವಲ್ಪ ಸಂತೋಷ ಪಡಿಸಿದರೆ ಭಗವಂತ ಮೆಚ್ಚುತ್ತಾನೆ."
ತಂದೆಯ ಮಾತಿಗೆ ಮಗಳು,ಅಳಿಯ ಒಪ್ಪಿದರು. "ನೀವೇ ಏನು ಬೇಕಾದರೂ ಪ್ಲಾನ್ ಮಾಡಿ, ಹಣ ನಮ್ಮದು, ಪ್ಲಾನ್ ನಿಮ್ಮದು" ಎಂದರು. ಸರಿ. ಯೋಜನೆ ರೂಪಿಸಿದ್ದಾಯ್ತು. ಹೇಗೂ ನಮಗೆಲ್ಲಾ ಪರಿಚಿತರಾದ ಡಾ. ಹೆಬ್ಬಾರ್ ವೃದ್ಧಾಶ್ರಮವನ್ನು ನಡೆಸುತ್ತಿದ್ದಾರೆ, ಮಳೆಗಾಲ ಬೇರೆ! ಅಲ್ಲಿನ ನಿವಾಸಿಗಳಿಗೆ ಬೆಚ್ಚಗಿನ ಸ್ವೆಟರ್ ಮತ್ತು ಟವೆಲುಗಳನ್ನು ಕೊಡಲು ತೀರ್ಮಾನಿಸಿ ಕಾರ್ಯಕ್ರಮ ನಿಶ್ಚಯ ಗೊಳಿಸಿದ್ದಾಯ್ತು. ದಿನಾಂಕ 22.7.2012 ರಂದು ಸತ್ಸಂಗ ನಡೆಸಲು ತಿಪಟೂರು ಚಿನ್ಮಯ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಬರುತ್ತಾರೆ, ಅವರಿಂದ ಅಲ್ಲೂ ಒಂದು ಸತ್ಸಂಗ ಮಾಡಿ ಸ್ವೆಟರ್ ವಿತರಿಸಿ, ಎಲ್ಲರೊಡನೆ ಸಿಹಿ ಊಟಮಾಡಿಬರಲು ತೀರ್ಮಾನಿಸಿದೆವು.
ಈಶಾವಾಸ್ಯಮ್ ನಲ್ಲಿ ಸಂಜೆ 6.00 ರಿಂದ 7.00 ರವರಗೆ ಸತ್ಸಂಗ ನಡೆದ ಕೂಡಲೇ ನಾಲ್ಕು ಕಾರುಗಳು ವೃದ್ಧಾಶ್ರಮತ್ತ ಹೊರಟವು. ವೃದ್ಧಾಶ್ರಮದಲ್ಲಿ ಕೆಲವು ಮಕ್ಕಳಿಗೂ ಆಶ್ರಯ ಕೊಟ್ಟಿದ್ದಾರೆ. ಆ ಮಕ್ಕಳಂತೂ ಕುಳಿದು ಕುಪ್ಪಳಿಸಿದವು. ಸುಧರ್ಮ ಚೈತನ್ಯರ ಸವಿಯಾದ ಮಾತುಗಳು, ಭಜನೆ, ಮಕ್ಕಳ ಒಡನಾಟದಿಂದ ಎಲ್ಲರೂ ಆನಂದ ಸಾಗರದಲ್ಲಿ ತೇಲಿದೆವು. 'ಅಕ್ಷಯಾ, ನೀನು ನೂರ್ಕಾಲ ಬಾಳಮ್ಮಾ' ಎಂದು ಎಲ್ಲರೂ ಹರಸುತ್ತಾ ಬಿಂದು ಮತ್ತು ಅವರ ಪತಿ ರಘು ಅವರ ಉದಾರತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಭಗವಂತನು ಅವರ ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯವನ್ನು ದಯಪಾಲಿಸಲೆಂದು ಹರಸಿದೆವು. ಅಂತೂ ಒಂದು ವಿಶೇಷ ಕಾರ್ಯಕ್ರಮವನ್ನು ರೂಪಿಸಿದ ಕೀರ್ತಿ ಕವಿನಾಗರಾಜರಿಗೂ ಮತ್ತು ಅವರ ಪತ್ನಿ ಶ್ರೀಮತಿ ಭಾರತಿಯವರಿಗೂ ಸಲ್ಲುತ್ತದೆ. ವೇದಸುಧೆಯ ಓದುಗ ಮಿತ್ರರೂ ಕೂಡ ತಮ್ಮ ಮನೆಯ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಈ ಆಶ್ರಮದಲ್ಲಿ ಆಚರಿಸಬಹುದೆಂದು ತಿಳಿಸುತ್ತಾ ಹೀಗೆ ಮುಂದೆ ಬರುವ ಎಲ್ಲರಿಗೂ ತನ್ನ ಎಲ್ಲಾ ಸಹಕಾರವನ್ನೂ ನೀಡಲು ವೇದಸುಧೆ ಬಳಗ ಮತ್ತು ಹಾಸನದ ಚಿನ್ಮಯ ಸತ್ಸಂಗವು ಸಿದ್ಧವಿದೆ ಎಂದು ತಿಳಿಸಲು ಸಂತೋಷಿಸುತ್ತೇವೆ.
ವೃದ್ಧಾಶ್ರಮದಲ್ಲಿ ಒಟ್ಟು ಸುಮಾರು ಅರವತ್ತು ಜನ ನಿವಾಸಿಗಳಿದ್ದು ಒಂದು ದಿನದ ಊಟೋಪಚಾರಕ್ಕೆ ಐದು ಸಾವಿರ ರೂಗಳನ್ನು ನಿಗದಿಪಡಿಸಿರುತ್ತಾರೆ. | ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ |
| ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ |
| ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ |
| ಈಶಾವಾಸ್ಯಮ್ ನಲ್ಲಿ ಸತ್ಸಂಗದ ಒಂದು ನೋಟ |
| ವೃದ್ಧಾಶ್ರಮದ ಬಂಧುಗಳ ನಡುವೆ |
| ವೃದ್ಧಾಶ್ರಮದ ಬಂಧುಗಳ ನಡುವೆ |
| ವೃದ್ಧಾಶ್ರಮದ ಬಂಧುಗಳ ನಡುವೆ |
| ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ |
| ವೃದ್ಧಾಶ್ರಮದ ಬಂಧುಗಳ ನಡುವೆ |
| ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ |
| ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ |
| ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ |
| ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ |
| ವೃದ್ಧಾಶ್ರಮದ ಬಂಧುಗಳ ನಡುವೆ |
| ವೃದ್ಧಾಶ್ರಮದ ಬಂಧುಗಳ ನಡುವೆ |
| ವೃದ್ಧಾಶ್ರಮದ ಬಂಧುಗಳ ನಡುವೆ |
| ವೃದ್ಧಾಶ್ರಮದಲ್ಲಿರುವ ಮಕ್ಕಳೊಡನೆ |
| ಬೆಂಗಳೂರಿನಲ್ಲಿರುವ ಮೊಮ್ಮಗಳ ಹುಟ್ಟುಹಬ್ಬವನ್ನು ಹಾಸನದ ವೃದ್ಧಾಶ್ರಮದಲ್ಲಿ ಆಚರಿಸುವಾಗ ಕವಿ ನಾಗರಾಜ್ ತಮ್ಮನ್ನು ತಾವು ಮರೆತಿದ್ದರು. |
| ವೃದ್ಧಾಶ್ರಮದ ಮಕ್ಕಳೊಡನೆ ಹೆಚ್.ಎಸ್.ರಮೇಶ್ |
ಶ್ರೀ ಸುಧರ್ಮ ಚೈತನ್ಯರು ಸಾಂದರ್ಭಿಕವಾಗಿ ಆಡಿದ ಮಾತುಗಳನ್ನು ಇಲ್ಲಿ ಆಲಿಸಬಹುದು:
-ಹರಿಹರಪುರ ಶ್ರೀಧರ್.
ಶುಕ್ರವಾರ, ಜುಲೈ 13, 2012
ಒಲವಿನ ಒರತೆ ಬತ್ತದಿರಲಿ
ನೋವಿನಲ್ಲಿ ನಲಿವು
ದುಃಖದಲ್ಲಿದ್ದಾಗ, ಕಷ್ಟದಲ್ಲಿದ್ದಾಗ ಸ್ಪಂದಿಸುವವರನ್ನು ನೆನೆಸಿಕೊಳ್ಳಬೇಕು. ಸುಖವಾಗಿದ್ದಾಗ, ಸಮೃದ್ಧಿಯಾಗಿದ್ದಾಗ ಜೊತೆಗಿದ್ದವರೆಲ್ಲಾ ನಮ್ಮ ಕಷ್ಟಕ್ಕೆ, ದುಃಖಕ್ಕೆ ಸ್ಪಂದಿಸುತ್ತಾರೆಂದು ಹೇಳುವಂತಿಲ್ಲ. ಪ್ರತಿಯೊಬ್ಬರಲ್ಲೂ ಒಳ್ಳೆಯ, ಕೆಟ್ಟ ಗುಣಗಳು ಇರುತ್ತವೆ. ಒಳ್ಳೆಯ ಗುಣಗಳು ಹೊರಹೊಮ್ಮಿದಾಗ ಮಾತ್ರ ಅವರು ನಮಗೆ ಪ್ರಿಯರಾಗುತ್ತಾರೆ. ಇತ್ತೀಚಿನ ಎರಡು ಘಟನೆಗಳು ನನಗೆ ನೆನಪಿಗೆ ಬರುತ್ತಲೇ ಇರುತ್ತವೆ.
ಘಟನೆ -೧:
ಚಿಂತಿಸಬೇಡಿ, ನಾನು ನಿಮ್ಮೊಂದಿಗಿದ್ದೇನೆ!
ಅಂದು ನನ್ನ ಮನಸ್ಸಿಗೆ ನೋವಾಗುವಂತಹ ಘಟನೆ ನಡೆದಿತ್ತು. ಅದನ್ನು ತಪ್ಪಿಸಲಾಗಲೀ, ತಡೆಯಲಾಗಲೀ ನನಗೆ ಆಗಿರಲಿಲ್ಲ. ನನ್ನ ಕೈಮೀರಿದ ವಿಷಯವಾಗಿದ್ದರೂ ವೈಯಕ್ತಿಕವಾಗಿ ನನ್ನ ತಪ್ಪಿಲ್ಲದಿದ್ದರೂ ಅಂತಹ ಪ್ರಸಂಗಕ್ಕೆ ನಾನು ಹೊಣೆ ಹೊರಬೇಕಿತ್ತು. ದೂಷಿಸಲು ಯಾರಾದರೂ ಬೇಕಿತ್ತು. ಅದು ನಾನೇ ಅಗುವ ಎಲ್ಲಾ ಸಂಭವವೂ ಇತ್ತು. ನನಗೆ ತಡೆಯಲಾಗದಷ್ಟು ದುಃಖವಾಗಿತ್ತು. ಯಾರಿಗೂ ಕಾಣದಂತೆ ಹೊರಗೆ ಹೋಗಿ ಗಿಡದ ಮರೆಯಲ್ಲಿ ನಿಂತು ಕಣ್ಣು ಒರೆಸಿಕೊಳ್ಳುತ್ತಿದ್ದೆ. ನನ್ನ ತಮ್ಮನ ಮಗ ಅದನ್ನು ಗಮನಿಸಿ (ಬಹುಷಃ ಆತ ನನ್ನನ್ನು ಮೊದಲಿನಿಂದ ಗಮನಿಸುತ್ತಿದ್ದಿರಬೇಕು) "ದೊಡ್ಡಪ್ಪ, ಬನ್ನಿ, ಕರೆಯುತ್ತಿದ್ದಾರೆ"ಎಂದು ಕರೆದ. ಯಾರೂ ನನ್ನನ್ನು ಕರೆದಿರಲಿಲ್ಲ. ಅವನು ಅಂದು ಸಾಯಂಕಾಲ ನನ್ನನ್ನು ಕಾರಿನಲ್ಲಿ ಬಸ್ ನಿಲ್ದಾಣಕ್ಕೆ ಬಿಡಲು ಬಂದವನು ನಾನು ಮೌನವಾಗಿದ್ದುದನ್ನು ಗಮನಿಸಿ ನನ್ನ ತೊಡೆಯ ಮೇಲೆ ಕೈಯಿಟ್ಟು "ದೊಡ್ಡಪ್ಪ, ಚಿಂತೆ ಮಾಡಬೇಡಿ, ನಾನು ನಿಮ್ಮೊಂದಿಗಿದ್ದೇನೆ" ಎಂದು ಹೇಳಿದ್ದು ಅವನ ಹೃದಯದಿಂದ ಬಂದ ಮಾತಾಗಿತ್ತು. ಬಿರುಬೇಸಿಗೆಯ ಬಿಸಿಲಿನ ಝಳದಿಂದ ತತ್ತರಿಸಿ ಗಂಟಲು ಒಣಗಿದ್ದವನಿಗೆ ಶೀತಲ ತಂಗಾಳಿ ಸೋಕಿದ ಅನುಭವವಾಗಿತ್ತು. ಕಣ್ಣಂಚಿನಿಂದ ಜಿನುಗಿದ ನೀರು ಒರೆಸಿಕೊಂಡೆ.
ಘಟನೆ -೨:
ಸಮಾಧಾನ ಮಾಡಿಕೋ, ತಾತ!
ಬೆಂಗಳೂರಿನಲ್ಲಿ ಎಲ್.ಕೆ.ಜಿ.ಯಲ್ಲಿ ಓದುತ್ತಿರುವ ನಾಲ್ಕು ವರ್ಷದ ನನ್ನ ಮೊಮ್ಮಗಳು ಅಕ್ಷಯಳಿಗೆ ದಸರಾ ರಜ ಬಂದಾಗ ಕೆಲವು ದಿನ ನಮ್ಮೊಡನೆ ಇರಲಿ ಎಂದು ಹಾಸನಕ್ಕೆ ಕರೆದುಕೊಂಡು ಬಂದಿದ್ದೆ. ಅವಳಿಗೂ ಖುಷಿಯಾಗಿತ್ತು. ದಿನ ಕಳೆದಿದ್ದೇ ಗೊತ್ತಾಗುತ್ತಿರಲಿಲ್ಲ. ದಿನವೆಲ್ಲಾ ಅವಳೊಂದಿಗೆ ಆಡಬೇಕು, ರಾತ್ರಿ ಮಲಗುವ ಮುನ್ನ ೩-೪ ಕಥೆಗಳನ್ನಾದರೂ ಹೇಳಬೇಕು, ಆನಂತರವೇ ಅವಳು ಮಲಗುತ್ತಿದ್ದುದು. ನನಗೆ ಆಗಾಗ್ಗೆ ಮಧ್ಯರಾತ್ರಿಯಲ್ಲಿ ಉಸಿರಾಟದ ತೊಂದರೆ ಉಂಟಾಗುತ್ತಿತ್ತು. ಗಂಟಲಿನ ಹತ್ತಿರ ತಡೆಯುಂಟಾಗಿ ಉಸಿರನ್ನು ಒಳಕ್ಕೆ ಎಳೆದುಕೊಳ್ಳುವುದು, ಬಿಡುವುದಕ್ಕೆ ಹರಸಾಹಸ ಪಡಬೇಕಾಗುತ್ತಿತ್ತು. ಹೀಗಾದಾಗ ಧಡಕ್ಕನೆ ಎಚ್ಚರವಾಗಿ ಪರದಾಡಿಬಿಡುತ್ತಿದ್ದೆ. ಗಡಬಡಿಸಿ ಓಡಾಡುವುದು, ಹಾಗೂ ಹೀಗೂ ಸ್ವಲ್ಪ ಗಾಳಿ ಒಳಕ್ಕೆ ಹೋದಾಗ ಸುಧಾರಿಸಿಕೊಂಡು ನೀರು ಕುಡಿಯುವುದು, ಮೈಮೇಲಿನ ಷರ್ಟು, ಬನಿಯನ್‌ಗಳನ್ನು ಕಳಚಿ ಹಾಕಿ, ಎದೆ, ಗಂಟಲುಗಳಿಗೆ ವಿಕ್ಸ್ ಹಚ್ಚಿಕೊಂಡು ಹತ್ತು ನಿಮಿಷ ಜೋರಾಗಿ ಫ್ಯಾನು ಹಾಕಿಕೊಂಡು ಓಡಾಡಿದ ನಂತರ ಸಮಾಧಾನವಾಗಿ ಮಲಗಲು ಸಾಧ್ಯವಾಗುತ್ತಿತ್ತು. ಒರಗು ದಿಂಬು ಇಟ್ಟುಕೊಂಡು ಒರಗಿ ಕುಳಿತುಕೊಂಡ ಸ್ಥಿತಿಯಲ್ಲಿ ಮಲಗುತ್ತಿದ್ದೆ. ಒಂದು ದಿನ ನನ್ನ ಅಂತ್ಯ ಹೀಗೇ ಆಗುತ್ತದೆಯೇನೋ ಎಂದು ಎಷ್ಟೋ ಸಲ ನನಗೆ ಅನ್ನಿಸುತ್ತಿತ್ತು, ಮೊಮ್ಮಗಳು ಬಂದು ನಾಲ್ಕು ದಿನವಾಗಿತ್ತು. ಅಂದು ರಾತ್ರಿ ಕಥೆ ಕೇಳಿ ಅವಳು ಮಲಗಿದಾಗ ರಾತ್ರಿ ಹನ್ನೊಂದು ಹೊಡೆದಿತ್ತು. ರಾತ್ರಿ ಸುಮಾರು ೧೨-೩೦ರ ಹೊತ್ತಿಗೆ ನನಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಧಡಕ್ಕನೆ ಎದ್ದ ರಭಸಕ್ಕೆ ನನ್ನ ಪಕ್ಕ ಮಲಗಿದ್ದ ಮೊಮ್ಮಗಳಿಗೂ ಎಚ್ಚರವಾಯಿತು. ನನ್ನ ಪತ್ನಿ ಮೊಮ್ಮಗಳ ಆಟ, ಊಟಗಳ ಜೊತೆಗೆ ಹಬ್ಬದ ಕೆಲಸ, ಮನೆಕೆಲಸ ಕಾರ್ಯಗಳನ್ನೂ ಮಾಡಿ ಸುಸ್ತಾಗಿ ಮಲಗಿದ್ದು ಅವಳಿಗೆ ಎಚ್ಚರವಾಗಲಿಲ್ಲ. ಮೊಮ್ಮಗಳು ಎದ್ದು ಕುಳಿತು "ಏನಾಯಿತು, ತಾತ, ಸಮಾಧಾನ ಮಾಡಿಕೋ ತಾತ, ನೀರು ಕೊಡಲಾ, ಹಾಲು ಕುಡೀತೀಯಾ" ಎಂದು ವಿಚಾರಿಸಿದಾಗ ನನಗೆ ಹೃದಯ ತುಂಬಿ ಬಂತು. ಎದ್ದಿದ್ದ ರಭಸಕ್ಕೆ ನನಗೆ ಸ್ವಲ್ಪ ಉಸಿರಾಡಲು ಅನುಕೂಲವಾಯಿತು. ಇಟ್ಟುಕೊಂಡಿದ್ದ ನೀರು ಕುಡಿದೆ. ಮೊಮ್ಮಗಳು ನನ್ನ ಎದೆ, ಬೆನ್ನು ಸವರುತ್ತಿದ್ದಳು. ಅವಳನ್ನು ಬಾಚಿ ತಬ್ಬಿಕೊಂಡೆ. ಅವಳೂ ನನ್ನ ತಲೆ ಸವರಿ ನನ್ನ ಕೆನ್ನೆಗೆ ಮುತ್ತು ಕೊಟ್ಟಾಗ ನಾನು ನಿಜಕ್ಕೂ ಧನ್ಯನಾಗಿದ್ದೆ. ನನಗೆ ಸಮಾಧಾನವಾಗಿತ್ತು. ನಾನು ದಿಂಬಿಗೆ ಒರಗಿದಂತೆ ಮಲಗಿದಾಗ ಅವಳೂ ನನ್ನನ್ನು ಒರಗಿಕೊಂಡೇ ನಿದ್ದೆ ಮಾಡಿದ್ದಳು. ಏನೂ ಅರಿಯದ ನಾಲ್ಕು ವರ್ಷದ ಪುಟಾಣಿ ತೋರಿದ ಮಮತೆಯನ್ನು ನಾನು ಹೇಗೆ ಮರೆಯಲಿ?
[ಇದು 22-02-2011ರಂದು 'ಕವಿಮನ' ತಾಣದಲ್ಲಿ ಪ್ರಕಟಿಸಿದ ಬರಹ].ಅಕ್ಷಯ - ಶಾರದಾ - ರಾಷ್ಟ್ರಗೀತೆ
ಪುಟಾಣಿಗಳು ಅಕ್ಷಯ ಮತ್ತು ಶಾರದಾ ತಮ್ಮ ಬಾಲಸಹಜ ರೀತಿಯಲ್ಲಿ ರಾಷ್ಟ್ರಗೀತೆ ಅಭ್ಯಾಸ ಮಾಡುತ್ತಿದ್ದ ಚೇತೋಹಾರಿ ವಿಡಿಯೋ ಕ್ಲಿಪಿಂಗ್ ನಿಮಗಾಗಿ:
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
