ಸೋಮವಾರ, ಜುಲೈ 16, 2012

ಪುಟ್ಟಗೌರಿಯ ಜನ್ಮದಿನ


                                       
                                                                  ಜನ್ಮದಿನದ ಗೀತೆ
      ಮಕ್ಕಳ ಜನ್ಮದಿನದ ಆಚರಣೆ ಕುರಿತು ಈ ಹಿಂದೆ ಒಂದು ಲೇಖನ ಬರೆದಿದ್ದೆ. ಇದರ ಮುಂದುವರಿಕೆಯೆಂಬಂತೆ ದಿನಾಂಕ ೧೪-೦೬-೨೦೧೧ರಂದು ನಡೆದ ನನ್ನ ಮೊಮ್ಮಗಳು ಅಕ್ಷಯಳ ೫ನೆಯ ವರ್ಷದ ಜನ್ಮದಿನವನ್ನು ಅಳಿಯ ರಾಘವೇಂದ್ರ ಮತ್ತು ಮಗಳು ಬಿಂದು ಆಚರಿಸಿದ ಪರಿ ಕುರಿತು ಈಗ ಹೇಳುತ್ತಿರುವೆ. ಹೆಚ್.ಎಸ್.ಆರ್. ಲೇ ಔಟಿನ ೪ನೆಯ ಸೆಕ್ಟರ್, ೧೬ನೆಯ ಮುಖ್ಯರಸ್ತೆಯ ೧೫ನೆಯ ಅಡ್ಡರಸ್ತೆಯಲ್ಲಿರುವ ಸಮರ್ಥನಮ್ ಟ್ರಸ್ಟ್‌ನವರು ಅಂಗವಿಕಲರು, ಬಡ ಹಾಗೂ ಹಿಂದುಳಿದ ಮಕ್ಕಳಿಗಾಗಿ ನಡೆಸುತ್ತಿರುವ ವಸತಿ ಶಾಲೆಯ ಮಕ್ಕಳೊಂದಿಗೆ ಮಗಳ ಜನ್ಮದಿನ ಆಚರಿಸಲು ಅವರು ನಿರ್ಧರಿಸಿ ಸಂಬಂಧಿಸಿದವರೊಂದಿಗೆ ಮಾತನಾಡಿದರು. ಅದೇ ದಿನ ಹಿರಿಯರೊಬ್ಬರು ತಮ್ಮ ೪೧ನೆಯ ವಿವಾಹ ವಾರ್ಷಿಕೋತ್ಸವದ ನಿಮಿತ್ತ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ಆದ್ದರಿಂದ ಮೊದಲು ತಾವು ಮಾಡಬೇಕೆಂದುಕೊಂಡಿದ್ದ ಊಟದ ವ್ಯವಸ್ಥೆಯನ್ನು ಕೈಬಿಟ್ಟು ಶಾಲೆಯಲ್ಲಿದ್ದ ಎಲ್ಲಾ ೧೭೦ ಮಕ್ಕಳಿಗೆ ಪ್ರತಿಯೊಬ್ಬರಿಗೂ ೨೦೦ ಪುಟಗಳ ಒಳ್ಳೆಯ ಗುಣಮಟ್ಟದ ಎರಡು ನೋಟ್ ಪುಸ್ತಕಗಳು, ಪೆನ್ನು, ಪೆನ್ಸಿಲ್ ಮತ್ತು ಎರೇಸರ್ ಗಳನ್ನು ಕೊಡಲು ತೀರ್ಮಾನಿಸಿದರು.

                                                              ಅಜ್ಜಿಯಿಂದ ಆರತಿ
     ಬೆಳಿಗ್ಗೆ ಎಂದಿನಂತೆ ಶಾಲೆಗೆ ಹೋಗಿಬಂದ ಮೊಮ್ಮಗಳು ತನ್ನ ತರಗತಿಯ ಮಕ್ಕಳಿಗೆ ಮತ್ತು ಶಾಲಾ ಶಿಕ್ಷಕರು, ಸಿಬ್ಬಂದಿಗೆ ಚಾಕೊಲೇಟು ಹಂಚಿ ಬಂದಿದ್ದಳು. ಸಾಯಂಕಾಲ ೬ ಘಂಟೆಗೆ ಅವಳಿಗೆ ಹೊಸಬಟ್ಟೆ ಹಾಕಿ ಆರತಿ ಮಾಡಿದರು. ಮನೆಯವರು ಬಿಟ್ಟರೆ ಅಲ್ಲಿ ಬೇರೆ ಯಾರೂ ಇರಲಿಲ್ಲ, ಯಾರನ್ನೂ ಆಹ್ವಾನಿಸಿರಲಿಲ್ಲ. ಬಹುಷಃ ವಾರಾಂತ್ಯದಲ್ಲಾಗಿದ್ದರೆ ಓರಗೆಯ ಮಕ್ಕಳು ಮತ್ತು ಬಂಧು-ಮಿತ್ರರನ್ನು ಆಹ್ವಾನಿಸುತ್ತಿದ್ದರೋ ಏನೋ! ಆಗ ಇದ್ದ ಮೊಮ್ಮಗಳ ಸ್ನೇಹಿತೆ ಎಂದರೆ ಮನೆಕೆಲಸದವಳ ಮಗಳು ಭೀಮಾ ಮಾತ್ರ. ಅವಳಿಗೇ ಮೊಮ್ಮಗಳು ಸಿಹಿ ಮತ್ತು ಉಡುಗೊರೆ ನೀಡಿದಳು. ನಂತರ ನಾವು ಸಮರ್ಥನಮ್ ಟ್ರಸ್ಟ್ ನಡೆಸುತ್ತಿದ್ದ ಶಾಲೆಗೆ ಸುಮಾರು ೬-೩೦ರ ವೇಳೆಗೆ ಹೋದೆವು. ಮೊದಲೇ ಕೊಟ್ಟಿದ್ದ ಬಲೂನುಗಳನ್ನು ಕಟ್ಟಿ ಶಾಲೆಯನ್ನು ಅಲಂಕರಿಸಿದ್ದರು. ಮುಂಭಾಗದಲ್ಲಿ ಬಣ್ಣದ ರಂಗೋಲಿ ಬರೆದು ಅಕ್ಷಯಳಿಗೆ ಶುಭಾಶಯ ಕೋರಿ ಬರೆದಿದ್ದರು. ಒಳಗೆ ಹೋದ ನಮಗೆ ಶಾಲೆಯ ಮಕ್ಕಳನ್ನು ಕಂಡು ಅವರ ಸ್ಥಿತಿ, ಬಡತನ ಕಂಡು ಮರುಕವಾಯಿತು. ಮುಂದೆ ಅವರಿಗೆ ಸಹಾಯವಾಗುವಂತಹ ಕೆಲಸಕ್ಕೆ ಸಹಕರಿಸಬೇಕೆಂದುಕೊಂಡೆವು. ಶಾಲೆಯ ಅಂಧ ಶಿಕ್ಷಕರೊಬ್ಬರು ಅಕ್ಷಯಳ ಜನ್ಮದಿನದ ಕುರಿತು ತಿಳಿಸಿ ಅವಳಿಗೆ ಮತ್ತು ಕುಟುಂಬದ ಎಲ್ಲರಿಗೆ ಶುಭ ಕೋರಿ ಸ್ವಾಗತಿಸಿದರು. ನನ್ನ ಮೊಮ್ಮಗಳು ಅಲ್ಲಿನ ಮಕ್ಕಳಿಗಾಗಿ ತಾನು ಕಲಿತಿದ್ದ ಎರಡು ಹಾಡು ಹೇಳಿದಳು. ಒಬ್ಬರು ಉಪಾಧ್ಯಾಯಿನಿ ಆರತಿ ಬೆಳಗಿದ ನಂತರ ಮಕ್ಕಳು ಕನ್ನಡದಲ್ಲಿ ಒಂದು ಜನ್ಮದಿನದ ಶುಭಾಶಯ ಗೀತೆ ಹಾಡಿದರು. ಕೇಕು ಕತ್ತರಿಸಿ ಎಲ್ಲಾ ಮಕ್ಕಳಿಗೆ ಸಿಹಿ ಮತ್ತು ತಂದಿದ್ದ ಪುಸ್ತಕ, ಪೆನ್ನು, ಪೆನ್ಸಿಲ್ ಮತ್ತು ಎರೇಸರ್‌ಗಳನ್ನು ಹಂಚಲಾಯಿತು. ಅದನ್ನು ಪಡೆದ ಮಕ್ಕಳು ಕುತೂಹಲ ಮತ್ತು ಸಂತಸದಿಂದ ಪುಸ್ತಕ, ಪೆನ್ನುಗಳನ್ನು ನೋಡುತ್ತಿದ್ದುದು ಚೇತೋಹಾರಿಯಾಗಿತ್ತು. ಅದೇ ದಿನ ಆ ಶಾಲೆಯ ಮಧು ಎಂಬ ೫ನೆಯ ತರಗತಿಯ ಹೆಣ್ಣುಮಗುವಿನ ಜನ್ಮದಿನವೂ ಆಗಿದ್ದು ಆ ಮಗುವಿಗೂ ಶುಭ ಹಾರೈಸಲಾಯಿತು. ಆ ಮಗು ಎಲ್ಲರಿಗೂ ಚಾಕೊಲೇಟುಗಳನ್ನು ಹಂಚಿತು. ನಾವೂ ಸಂತೋಷದಿಂದ ಪಡೆದೆವು. ವಿವಾಹ ವಾರ್ಷಿಕೋತ್ಸವಕ್ಕಾಗಿ ಬಂದಿದ್ದವರ ಪೈಕಿ ಒಬ್ಬರು ಮಾತ್ರ ಆ ಮಗುವನ್ನು ಕಂಡು ಚಾಕೊಲೇಟು ಪಡೆಯಲು ನಿರಾಕರಿಸಿದ್ದು, ನನಗೆ ಅವರ ಮನೋಭಾವದ ಬಗ್ಗೆ ಅಸಹ್ಯವೆನಿಸಿತು.
     ಈ ಸಮಾರಂಭ ವಿಶೇಷವಾದದ್ದು, ಹೇಳಿಕೊಳ್ಳುವಂತಹುದು ಅಲ್ಲವಾದರೂ, ಸಮಾಜಮುಖಿಯಾಗಿದ್ದರಿಂದ ಮತ್ತು ಈರೀತಿಯ ಕಾರ್ಯಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಬರೆದಿರುವೆ. ಕೆಲವರಿಗಾದರೂ ಇದರಿಂದ ಪ್ರೇರಣೆ ಸಿಗಲಿ ಎಂಬ ಆಶಯವೂ ಬರೆಯಲು ಪ್ರೇರಿಸಿದೆ. ಸಮಾರಂಭದ ಕೆಲವು ದೃಷ್ಯಗಳು ಮತ್ತು ಒಂದು ಚಿಕ್ಕ ವಿಡಿಯೋ ನಿಮ್ಮ ಮಾಹಿತಿಗಾಗಿ ನೀಡಿರುವೆ.
                                               ಶಾಲೆ ನಡೆಸುತ್ತಿರುವ ಸಮರ್ಥನಮ್ ಟ್ರಸ್ಟ್ ನ ಫಲಕ
                            
                                                       ಶಾಲೆಯ ಉಪಾಧ್ಯಾಯಿನಿಯಿಂದ ಆರತಿ
                                                             ಸಿಹಿ ವಿತರಿಸಿದ ಅಕ್ಷಯ

ಸಿಹಿ ವಿತರಣೆ

                            
                                                  ಮಕ್ಕಳಿಗಿಲ್ಲ ಜಾತಿಬೇಧ, ಮೇಲು-ಕೀಳು ಗೊಂದಲ

                ನಗು ನಗುತಿರಿ ಎಲ್ಲಾ ಪುಟಾಣಿಗಳೇ
***************
[16-06-2011ರಂದು 'ಕವಿಮನ'ದಲ್ಲಿ ಪ್ರಕಟಿತ ಬರಹ]

ಭಾನುವಾರ, ಜುಲೈ 15, 2012

ಮಕ್ಕಳ ಜನ್ಮ ದಿನ - ಹೀಗೊಂದು ಬದಲಾವಣೆ ಬರಲಿ


          ಚಿನ್ಮಯ ಮಿಷನ್ ವತಿಯಿಂದ ಏರ್ಪಡಿಸಿದ್ದ ಉಪನ್ಯಾಸವೊಂದರ ಸಂದರ್ಭದಲ್ಲಿ ಹಂಚಲಾದ ಕರಪತ್ರದಲ್ಲಿ 'ಜನ್ಮದಿನದ ಗೀತೆ' ಎಂದು ಈ ಕೆಳಗೆ ತಿಳಿಸಿರುವದನ್ನು ಪ್ರಕಟಿಸಲಾಗಿತ್ತು. ಮಕ್ಕಳ ಜನ್ಮದಿನದಂದು ಇದನ್ನು ಹಾಡಬಹುದೆಂದು ಸೂಚಿಸಲಾಗಿತ್ತು.


ಜನ್ಮದಿನಮಿದಂ ಅಯಿ ಪ್ರಿಯ ಸಖೇ
ಶಂ ತನೋತು ತೇ ಸರ್ವದಾ ಮುದಂ


ಪ್ರಾರ್ಥಯಾಮಹೇ ಭವ ಶತಾಯುಷೀ
ಈಶ್ವರಸ್ಸದಾ ತ್ವಾಂ ರಕ್ಷತು


ಪುಣ್ಯಕರ್ಮಣಾ ಕೀರ್ತಿಮರ್ಜಯ
ಜೀವನಂ ತವ ಭವತು ಸಾರ್ಥಕಂ 

     'ಹ್ಯಾಪಿ ಬರ್ತ್ ಡೇ ಟು ಯೂ' ಎಂದು ಹಾಡುವ ಅಂಧಾನುಕರಣೆ ಬೆಳೆಸಿಕೊಂಡಿರುವ ನಾವು ಮಕ್ಕಳಿಗೆ ಎಷ್ಟು ವಯಸ್ಸಾಗಿದೆಯೋ ಅಷ್ಟು ಮೇಣದ ಬತ್ತಿಗಳನ್ನು ಹಚ್ಚಿ ಕೇಕಿನ ಮೇಲೆ ಇಟ್ಟು ಉಫ್ ಎಂದು ಆರಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಆಲೋಚಿಸಬೇಡವೇ? ಮೇಣದ ಬತ್ತಿಗಳನ್ನು ಆರಿಸುವುದರ ಸಂಕೇತ ಬಹುಷಃ ಇಷ್ಟು ವರ್ಷ ಕಳೆಯಿತು ಎಂದಿರಬಹುದೇ? ಬದಲಾಗಿ ಮಕ್ಕಳಿಗೆ ತೈಲದ ಅಭ್ಯಂಜನ ಮಾಡಿಸಿ ಹೊಸ ಬಟ್ಟೆ ಹಾಕಿ ಶೃಂಗರಿಸಿ ಹಬ್ಬದ ಅಡಿಗೆ ಮಾಡಿ ಮನೆ ಮಂದಿ ಸಂಭ್ರಮಿಸಬಹುದಲ್ಲವೇ?  ಜ್ಯೋತಿ ಆರಿಸುವ ಬದಲಿಗೆ ಮಗುವಿನ ಕೈಯಲ್ಲೇ ದೀಪ ಬೆಳಗಿಸಬಹುದು. ನೆಂಟರಿಷ್ಟರು, ಸ್ನೇಹಿತರು, ಓರಗೆಯ ಮಕ್ಕಳನ್ನು ಆಹ್ವಾನಿಸಿ ಸಾಯಂಕಾಲದಲ್ಲಿ ಮಗುವಿಗೆ ಆರತಿ ಮಾಡಿ ಸಿಹಿ ಹಂಚಬಹುದು. ಹ್ಯಾಪಿ ಬರ್ತ್ ಡೇ ಹಾಡುವ ಬದಲಿಗೆ ಸಂಸ್ಕೃತದ ಮೇಲೆ ತಿಳಿಸಿದ ಹಾಡನ್ನಾಗಲೀ ಅಥವ ಕನ್ನಡದ ಈ ಕೆಳಕಂಡ ಹಾಡನ್ನಾಗಲೀ ಹಾಡಬಹುದಲ್ಲವೇ?  (ಮೇಲಿನ ಹಾಡಿನ ಸ್ಫೂರ್ತಿಯಿಂದ ಇದನ್ನು ರಚಿಸಿದೆ).

ಪುಟ್ಟ ಗೌರಿಗೆ . . ಜನ್ಮದಿನವಿದು|
ಬಾಳ ತೇರಿಗೆ . . ನವ್ಯ ನಡೆಯಿದು ||


ದೇವ ಕಾಯಲಿ . . ಆಯು ನೀಡಲಿ|
ಜನರು ಹರಸಲಿ . . ಬಾಳು ಬೆಳಗಲಿ ||

ಸತ್ಯಧರ್ಮದಿ . . ಸಕಲಸಂಪದ|
ಶಾಂತಿ ನೆಮ್ಮದಿ . . ಸುಖವ ನೀಪಡಿ ||


ಪುಟ್ಟ ಗೌರಿಗೆ . . ಜನ್ಮದಿನವಿದು|
ಬಾಳ ತೇರಿಗೆ . . ನವ್ಯ ನಡೆಯಿದು ||

     (ಪುಟ್ಟ ಗೌರಿ ಎಂಬ ಸ್ಥಳದಲ್ಲಿ ಸಂಬಂಧಿಸಿದ ಮಗುವಿನ ಹೆಸರು ಸೇರಿಸಿ ಹಾಡಬಹುದು).

     ಈ ಸಂಭ್ರಮವನ್ನು ಬಡ ಮತ್ತು ಅನಾಥ ಮಕ್ಕಳಿಗೆ ಊಟೋಪಚಾರ ಮಾಡುವ ಮೂಲಕ ಅಥವಾ ಉತ್ತಮವಾದ ಸಮಾಜಕಾರ್ಯದಲ್ಲಿ ತೊಡಗಿರುವ ಸೇವಾ ಸಂಸ್ಥೆಗೆ ಧನ ಸಹಾಯ ಮಾಡುವ ಮೂಲಕವೂ ಆಚರಿಸಬಹುದು. ಮಗುವಿನ ಕೈಯಲ್ಲೇ ಇದನ್ನು ಮಾಡಿಸಿದರೆ ಮಗುವಿಗೆ ಸತ್ ಸಂಸ್ಕಾರ ನೀಡಿದಂತೆಯೂ ಆಗುವುದು. ಸಹೃದಯರು ಈ ಬಗ್ಗೆ ಚಿಂತಿಸಿ ಕಾರ್ಯ ಪ್ರವೃತ್ತರಾಗಬಹುದಲ್ಲವೇ?
************
-ಕ.ವೆಂ.ನಾಗರಾಜ್.

ಶನಿವಾರ, ಜುಲೈ 14, 2012

ಮುತ್ತಾತ - ಮರಿಮಗಳು


ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು!

ಮುತ್ತಾತನೊಂದಿಗೆ ಮರಿಮಗಳು ಅಕ್ಷಯ  [28-12-2008]

ಶುಕ್ರವಾರ, ಜುಲೈ 13, 2012

ಒಲವಿನ ಒರತೆ ಬತ್ತದಿರಲಿ


ನೋವಿನಲ್ಲಿ ನಲಿವು
     ದುಃಖದಲ್ಲಿದ್ದಾಗ, ಕಷ್ಟದಲ್ಲಿದ್ದಾಗ ಸ್ಪಂದಿಸುವವರನ್ನು ನೆನೆಸಿಕೊಳ್ಳಬೇಕು. ಸುಖವಾಗಿದ್ದಾಗ, ಸಮೃದ್ಧಿಯಾಗಿದ್ದಾಗ ಜೊತೆಗಿದ್ದವರೆಲ್ಲಾ ನಮ್ಮ ಕಷ್ಟಕ್ಕೆ, ದುಃಖಕ್ಕೆ ಸ್ಪಂದಿಸುತ್ತಾರೆಂದು ಹೇಳುವಂತಿಲ್ಲ. ಪ್ರತಿಯೊಬ್ಬರಲ್ಲೂ ಒಳ್ಳೆಯ, ಕೆಟ್ಟ ಗುಣಗಳು ಇರುತ್ತವೆ. ಒಳ್ಳೆಯ ಗುಣಗಳು ಹೊರಹೊಮ್ಮಿದಾಗ ಮಾತ್ರ ಅವರು ನಮಗೆ ಪ್ರಿಯರಾಗುತ್ತಾರೆ. ಇತ್ತೀಚಿನ ಎರಡು ಘಟನೆಗಳು ನನಗೆ ನೆನಪಿಗೆ ಬರುತ್ತಲೇ ಇರುತ್ತವೆ.

ಘಟನೆ -೧: 
ಚಿಂತಿಸಬೇಡಿ, ನಾನು ನಿಮ್ಮೊಂದಿಗಿದ್ದೇನೆ!
     ಅಂದು ನನ್ನ ಮನಸ್ಸಿಗೆ ನೋವಾಗುವಂತಹ ಘಟನೆ ನಡೆದಿತ್ತು. ಅದನ್ನು ತಪ್ಪಿಸಲಾಗಲೀ, ತಡೆಯಲಾಗಲೀ ನನಗೆ ಆಗಿರಲಿಲ್ಲ. ನನ್ನ ಕೈಮೀರಿದ ವಿಷಯವಾಗಿದ್ದರೂ ವೈಯಕ್ತಿಕವಾಗಿ ನನ್ನ ತಪ್ಪಿಲ್ಲದಿದ್ದರೂ ಅಂತಹ ಪ್ರಸಂಗಕ್ಕೆ ನಾನು ಹೊಣೆ ಹೊರಬೇಕಿತ್ತು. ದೂಷಿಸಲು ಯಾರಾದರೂ ಬೇಕಿತ್ತು. ಅದು ನಾನೇ ಅಗುವ ಎಲ್ಲಾ ಸಂಭವವೂ ಇತ್ತು. ನನಗೆ ತಡೆಯಲಾಗದಷ್ಟು ದುಃಖವಾಗಿತ್ತು. ಯಾರಿಗೂ ಕಾಣದಂತೆ ಹೊರಗೆ ಹೋಗಿ ಗಿಡದ ಮರೆಯಲ್ಲಿ ನಿಂತು ಕಣ್ಣು ಒರೆಸಿಕೊಳ್ಳುತ್ತಿದ್ದೆ. ನನ್ನ ತಮ್ಮನ ಮಗ ಅದನ್ನು ಗಮನಿಸಿ (ಬಹುಷಃ ಆತ ನನ್ನನ್ನು ಮೊದಲಿನಿಂದ ಗಮನಿಸುತ್ತಿದ್ದಿರಬೇಕು) "ದೊಡ್ಡಪ್ಪ, ಬನ್ನಿ, ಕರೆಯುತ್ತಿದ್ದಾರೆ"ಎಂದು ಕರೆದ. ಯಾರೂ ನನ್ನನ್ನು ಕರೆದಿರಲಿಲ್ಲ. ಅವನು ಅಂದು ಸಾಯಂಕಾಲ ನನ್ನನ್ನು ಕಾರಿನಲ್ಲಿ ಬಸ್ ನಿಲ್ದಾಣಕ್ಕೆ ಬಿಡಲು ಬಂದವನು ನಾನು ಮೌನವಾಗಿದ್ದುದನ್ನು ಗಮನಿಸಿ ನನ್ನ ತೊಡೆಯ ಮೇಲೆ ಕೈಯಿಟ್ಟು "ದೊಡ್ಡಪ್ಪ, ಚಿಂತೆ ಮಾಡಬೇಡಿ, ನಾನು ನಿಮ್ಮೊಂದಿಗಿದ್ದೇನೆ" ಎಂದು ಹೇಳಿದ್ದು ಅವನ ಹೃದಯದಿಂದ ಬಂದ ಮಾತಾಗಿತ್ತು. ಬಿರುಬೇಸಿಗೆಯ ಬಿಸಿಲಿನ ಝಳದಿಂದ ತತ್ತರಿಸಿ ಗಂಟಲು ಒಣಗಿದ್ದವನಿಗೆ ಶೀತಲ ತಂಗಾಳಿ ಸೋಕಿದ ಅನುಭವವಾಗಿತ್ತು. ಕಣ್ಣಂಚಿನಿಂದ ಜಿನುಗಿದ ನೀರು ಒರೆಸಿಕೊಂಡೆ.

ಘಟನೆ -೨:
ಸಮಾಧಾನ ಮಾಡಿಕೋ, ತಾತ!
     ಬೆಂಗಳೂರಿನಲ್ಲಿ ಎಲ್.ಕೆ.ಜಿ.ಯಲ್ಲಿ ಓದುತ್ತಿರುವ ನಾಲ್ಕು ವರ್ಷದ ನನ್ನ ಮೊಮ್ಮಗಳು ಅಕ್ಷಯಳಿಗೆ ದಸರಾ ರಜ ಬಂದಾಗ ಕೆಲವು ದಿನ ನಮ್ಮೊಡನೆ ಇರಲಿ ಎಂದು ಹಾಸನಕ್ಕೆ ಕರೆದುಕೊಂಡು ಬಂದಿದ್ದೆ. ಅವಳಿಗೂ ಖುಷಿಯಾಗಿತ್ತು. ದಿನ ಕಳೆದಿದ್ದೇ ಗೊತ್ತಾಗುತ್ತಿರಲಿಲ್ಲ. ದಿನವೆಲ್ಲಾ ಅವಳೊಂದಿಗೆ ಆಡಬೇಕು, ರಾತ್ರಿ ಮಲಗುವ ಮುನ್ನ ೩-೪ ಕಥೆಗಳನ್ನಾದರೂ ಹೇಳಬೇಕು, ಆನಂತರವೇ ಅವಳು ಮಲಗುತ್ತಿದ್ದುದು. ನನಗೆ ಆಗಾಗ್ಗೆ ಮಧ್ಯರಾತ್ರಿಯಲ್ಲಿ ಉಸಿರಾಟದ ತೊಂದರೆ ಉಂಟಾಗುತ್ತಿತ್ತು. ಗಂಟಲಿನ ಹತ್ತಿರ ತಡೆಯುಂಟಾಗಿ ಉಸಿರನ್ನು ಒಳಕ್ಕೆ ಎಳೆದುಕೊಳ್ಳುವುದು, ಬಿಡುವುದಕ್ಕೆ ಹರಸಾಹಸ ಪಡಬೇಕಾಗುತ್ತಿತ್ತು. ಹೀಗಾದಾಗ ಧಡಕ್ಕನೆ ಎಚ್ಚರವಾಗಿ ಪರದಾಡಿಬಿಡುತ್ತಿದ್ದೆ. ಗಡಬಡಿಸಿ ಓಡಾಡುವುದು, ಹಾಗೂ ಹೀಗೂ ಸ್ವಲ್ಪ ಗಾಳಿ ಒಳಕ್ಕೆ ಹೋದಾಗ ಸುಧಾರಿಸಿಕೊಂಡು ನೀರು ಕುಡಿಯುವುದು, ಮೈಮೇಲಿನ ಷರ್ಟು, ಬನಿಯನ್‌ಗಳನ್ನು ಕಳಚಿ ಹಾಕಿ, ಎದೆ, ಗಂಟಲುಗಳಿಗೆ ವಿಕ್ಸ್ ಹಚ್ಚಿಕೊಂಡು ಹತ್ತು ನಿಮಿಷ ಜೋರಾಗಿ ಫ್ಯಾನು ಹಾಕಿಕೊಂಡು ಓಡಾಡಿದ ನಂತರ ಸಮಾಧಾನವಾಗಿ ಮಲಗಲು ಸಾಧ್ಯವಾಗುತ್ತಿತ್ತು. ಒರಗು ದಿಂಬು ಇಟ್ಟುಕೊಂಡು ಒರಗಿ ಕುಳಿತುಕೊಂಡ ಸ್ಥಿತಿಯಲ್ಲಿ ಮಲಗುತ್ತಿದ್ದೆ. ಒಂದು ದಿನ ನನ್ನ ಅಂತ್ಯ ಹೀಗೇ ಆಗುತ್ತದೆಯೇನೋ ಎಂದು ಎಷ್ಟೋ ಸಲ ನನಗೆ ಅನ್ನಿಸುತ್ತಿತ್ತು, ಮೊಮ್ಮಗಳು ಬಂದು ನಾಲ್ಕು ದಿನವಾಗಿತ್ತು. ಅಂದು ರಾತ್ರಿ ಕಥೆ ಕೇಳಿ ಅವಳು ಮಲಗಿದಾಗ ರಾತ್ರಿ ಹನ್ನೊಂದು ಹೊಡೆದಿತ್ತು. ರಾತ್ರಿ ಸುಮಾರು ೧೨-೩೦ರ ಹೊತ್ತಿಗೆ ನನಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಧಡಕ್ಕನೆ ಎದ್ದ ರಭಸಕ್ಕೆ ನನ್ನ ಪಕ್ಕ ಮಲಗಿದ್ದ ಮೊಮ್ಮಗಳಿಗೂ ಎಚ್ಚರವಾಯಿತು. ನನ್ನ ಪತ್ನಿ ಮೊಮ್ಮಗಳ ಆಟ, ಊಟಗಳ ಜೊತೆಗೆ ಹಬ್ಬದ ಕೆಲಸ, ಮನೆಕೆಲಸ ಕಾರ್ಯಗಳನ್ನೂ ಮಾಡಿ ಸುಸ್ತಾಗಿ ಮಲಗಿದ್ದು ಅವಳಿಗೆ ಎಚ್ಚರವಾಗಲಿಲ್ಲ. ಮೊಮ್ಮಗಳು ಎದ್ದು ಕುಳಿತು "ಏನಾಯಿತು, ತಾತ, ಸಮಾಧಾನ ಮಾಡಿಕೋ ತಾತ, ನೀರು ಕೊಡಲಾ, ಹಾಲು ಕುಡೀತೀಯಾ" ಎಂದು ವಿಚಾರಿಸಿದಾಗ ನನಗೆ ಹೃದಯ ತುಂಬಿ ಬಂತು. ಎದ್ದಿದ್ದ ರಭಸಕ್ಕೆ ನನಗೆ ಸ್ವಲ್ಪ ಉಸಿರಾಡಲು ಅನುಕೂಲವಾಯಿತು. ಇಟ್ಟುಕೊಂಡಿದ್ದ ನೀರು ಕುಡಿದೆ. ಮೊಮ್ಮಗಳು ನನ್ನ ಎದೆ, ಬೆನ್ನು ಸವರುತ್ತಿದ್ದಳು. ಅವಳನ್ನು ಬಾಚಿ ತಬ್ಬಿಕೊಂಡೆ. ಅವಳೂ ನನ್ನ ತಲೆ ಸವರಿ ನನ್ನ ಕೆನ್ನೆಗೆ ಮುತ್ತು ಕೊಟ್ಟಾಗ ನಾನು ನಿಜಕ್ಕೂ ಧನ್ಯನಾಗಿದ್ದೆ. ನನಗೆ ಸಮಾಧಾನವಾಗಿತ್ತು. ನಾನು ದಿಂಬಿಗೆ ಒರಗಿದಂತೆ ಮಲಗಿದಾಗ ಅವಳೂ ನನ್ನನ್ನು ಒರಗಿಕೊಂಡೇ ನಿದ್ದೆ ಮಾಡಿದ್ದಳು. ಏನೂ ಅರಿಯದ ನಾಲ್ಕು ವರ್ಷದ ಪುಟಾಣಿ ತೋರಿದ ಮಮತೆಯನ್ನು ನಾನು ಹೇಗೆ ಮರೆಯಲಿ?
[ಇದು 22-02-2011ರಂದು 'ಕವಿಮನ' ತಾಣದಲ್ಲಿ ಪ್ರಕಟಿಸಿದ ಬರಹ].

ಅಕ್ಷಯ - ಶಾರದಾ - ರಾಷ್ಟ್ರಗೀತೆ

     ಪುಟಾಣಿಗಳು ಅಕ್ಷಯ ಮತ್ತು ಶಾರದಾ ತಮ್ಮ ಬಾಲಸಹಜ ರೀತಿಯಲ್ಲಿ ರಾಷ್ಟ್ರಗೀತೆ ಅಭ್ಯಾಸ ಮಾಡುತ್ತಿದ್ದ ಚೇತೋಹಾರಿ ವಿಡಿಯೋ ಕ್ಲಿಪಿಂಗ್ ನಿಮಗಾಗಿ: