ಮಂಗಳವಾರ, ಆಗಸ್ಟ್ 14, 2012

ಬಾಲ್ಯದ ನೆನಪು


     ಎದುರಿಗಿದ್ದ ಕನ್ನಡಿಯಲ್ಲಿ ನನ್ನ ಮುಖ ನಾನು ನೋಡಿಕೊಂಡೆ. ನೋಡುತ್ತಿದ್ದ ಹಾಗೆ ನನ್ನ ಹಳೆಯ ಮುಖಗಳು ನೆನಪಿಗೆ ಬಂದವು. ಚಿಕ್ಕ ಮಗುವಿದ್ದಾಗ ಮಗುವಿಗೆ ದೃಷ್ಟಿಯಾಗದಿರಲಿ ಎಂದು ಕೆನ್ನೆಯ ಮೇಲೆ ದೃಷ್ಟಿಬೊಟ್ಟು ಇಡುತ್ತಿದ್ದ ಕಾಲದಲ್ಲಿ ತೆಗೆದಿದ್ದ ಫೋಟೋದಲ್ಲಿ ನಾನು ದುಂಡು ದುಂಡಗಿದ್ದೆ. ಬಿಳಿಯ ಸಫಾರಿ ಶೈಲಿಯ ಹೊಸ ಅಂಗಿ, ಚಡ್ಡಿ, ಕೈಗೆ ಫೋಟೋ ತೆಗೆಸುವ ಸಲುವಾಗಿ ಹಾಕಿದ್ದ ಸ್ಟೀಲ್ ಚೈನಿನ ವಾಚು (ಬಹುಷಃ ನಮ್ಮಪ್ಪನದೇ ಇರಬೇಕು), ನೀಟಾಗಿ ತಲೆ ಬಾಚಿ ಎರಡು ಜುಟ್ಟು ಹಾಕಿ ಮುಡಿಸಿದ ಹೂವು, ಹಣೆಯಲ್ಲಿ ದುಂಡಗೆ ಇಟ್ಟಿದ್ದ ಸಾದು, ಕ್ಯಾಮರಾ ಕಡೆಗೆ ದಿಟ್ಟಿಸಿದ್ದ ಕಣ್ಣುಗಳು, ಒಟ್ಟಾರೆಯಾಗಿ ನನ್ನ ಕಣ್ಣಿಗೆ ಸುಂದರವಾಗೇ ಕಾಣುತ್ತಿದೆ.

08-05-1953ರಲ್ಲಿ ತೆಗೆದಿದ್ದ ಫೋಟೋ - ಒಂದೂವರೆ ವರ್ಷದವನಿದ್ದಾಗ
      ಪ್ರಾಥಮಿಕ ಶಾಲಾದಿನಗಳಲ್ಲಿ ಶಾಲೆಯಲ್ಲಿ ಬುದ್ಧಿವಂತನೆಂದು ಕರೆಸಿಕೊಳ್ಳುತ್ತಿದ್ದೆ. ಸಾಮಾನ್ಯವಾಗಿ ಕ್ಲಾಸಿಗೆ ಮಾನಿಟರ್ ಆಗುತ್ತಿದ್ದರಿಂದ ನೋಡಲು ಸುಂದರವಾಗಿದ್ದಿರಬಹುದು. ಮೇಷ್ಟ್ರು, ಮೇಡಮ್ಮುಗಳಿಗೆ ವಿಧೇಯನಾಗಿರುತ್ತಿದ್ದರಿಂದಲೂ ಮಾನಿಟರ್ ಮಾಡುತ್ತಿದ್ದರೇನೋ! ಆ ಕಾಲದಲ್ಲಿ ಚಿಕ್ಕ ಹುಡುಗರಾದ ನಾವು ಬಾಹ್ಯ ಸುಂದರತೆಗೆ ಹೆಚ್ಚು ಗಮನ ಕೊಡುತ್ತಿರಲಿಲ್ಲವೆಂಬುದು ಸತ್ಯ ಸಂಗತಿ. ಆಟ ಆಡಿ ಕುಣಿದು ಕುಪ್ಪಳಿಸಿ ಮೈ,ಕೈ, ಬಟ್ಟೆಯೆಲ್ಲಾ ಕೊಳೆ ಮಾಡಿಕೊಂಡು ಮನೆಗೆ ಬಂದಾಗ ಅಮ್ಮ ಶುಚಿಗೊಳಿಸಿ ಬೇರೆ ಬಟ್ಟೆ ಹಾಕುತ್ತಿದ್ದಳು. ಆಗ ಈಗಿನಂತೆ ಸರಿಯಾದ ಅಳತೆಯ ಅಂಗಿ-ಚಡ್ಡಿಗಳನ್ನು ಹೊಲೆಸುತ್ತಿರಲಿಲ್ಲ. ಬೆಳೆಯುವ ವಯಸ್ಸೆಂದು ಸ್ವಲ್ಪ ದೊಡ್ಡ ಅಳತೆಯ ಬಟ್ಟೆಯನ್ನೇ ತರುತ್ತಿದ್ದರು. ಹೆಚ್ಚು ಸಮಯ ಬಾಳಿಕೆ ಬರಲಿ ಎಂಬ ಕಾರಣವೂ ಇತ್ತು. ಚಡ್ಡಿ ಬೀಳದಿರಲಿ ಎಂದು >< ಆಕಾರದ ಲಾಡಿಗಳು (ಹಿಂಭಾಗದಿಂದ ಭುಜದ ಮೇಲೆ ಹಾದು ಬಂದು ಮುಂಭಾಗದಲ್ಲಿನ ಲೂಪ್ ಅಥವ ಗುಂಡಿಗಳಿಗೆ ಸೇರಿಸುವ) ಇರುತ್ತಿದ್ದವು. ಅದು ಆಗ ಫ್ಯಾಷನ್ ಅನ್ನಿಸಿಕೊಳ್ಳುತ್ತಿತ್ತು. ತಲೆಯ ಕೂದಲು ಬೇಗ ಬೆಳೆದುಬಿಡುತ್ತದೆ ಎಂದು ವರ್ಷದ ಯಾವುದೇ ಕಾಲದಲ್ಲಿ ಸಮ್ಮರ್ ಕಟ್ ಮಾಡಿಸುತ್ತಿದ್ದರು. ತಿಂಗಳಲ್ಲಿ ೧೦-೧೫ ದಿನ ದಿನಗಳು ತಲೆ ಬಾಚುವ ಪ್ರಮೇಯವೇ ಬರುತ್ತಿರಲಿಲ್ಲ. ಆಗ ರೆಡಿಮೇಡ್ ಬಟ್ಟೆಗಳನ್ನು ಮೂಟೆಯ ಗಂಟಿನಲ್ಲಿ ಕಟ್ಟಿ ಹೊತ್ತು ಬೀದಿಯಲ್ಲಿ ಮಾರಲು ಬರುತ್ತಿದ್ದರು. ಒಂದು ರೂಪಾಯಿಗೆ ಒಂದು ಅಂಗಿ ಸಿಗುತ್ತಿತ್ತು. ಸಾಮಾನ್ಯವಾಗಿ ತೆಗೆದುಕೊಡುತ್ತಿದ್ದ ಅರ್ಧ ತೋಳಿನ ಬಣ್ಣ ಬಣ್ಣದ ಅಂಗಿ ಮತ್ತು ಚಡ್ಡಿಗಳನ್ನು ಸಂಭ್ರಮದಿಂದ ಧರಿಸಿ ಖುಷಿ ಪಡುತ್ತಿದ್ದೆವು. ಇನ್ನೊಂದು ವಿಷಯವೆಂದರೆ ಆಗ ಈಗಿನಂತೆ ಖಾಸಗಿ ಶಾಲೆಗಳು ಇರುತ್ತಿರಲಿಲ್ಲ. ಶ್ರೀಮಂತರು, ಬಡವರು ಎಲ್ಲರೂ ಸರ್ಕಾರಿ ಕನ್ನಡ ಶಾಲೆಗಳಿಗೇ ಮಕ್ಕಳನ್ನು ಕಳಿಸುತ್ತಿದ್ದರು. ೫ನೆಯ ತರಗತಿಯಿಂದ ಎ,ಬಿ,ಸಿ,ಡಿ ಕಲಿಸಲಾಗುತ್ತಿತ್ತು. ಶ್ರೀಮಂತರ ಮಕ್ಕಳು ಠಾಕು-ಠೀಕಾಗಿ ಬರುತ್ತಿದ್ದರೆ ಬಡ ಮಕ್ಕಳು ಹರಕಲು ಬಟ್ಟೆ ಹಾಕಿಕೊಂಡು, ಹರುಕು ಚೀಲದಲ್ಲಿ ಸ್ಲೇಟು-ಬಳಪ ತರುತ್ತಿದ್ದರು. ಮಧ್ಯಮ ವರ್ಗಕ್ಕೆ ಸೇರಿದ ನಮ್ಮಂತಹವರು ಎರಡು ವರ್ಗಗಳ ಮಕ್ಕಳಿಗೂ ಹೊಂದುತ್ತಿದ್ದೆವು.

06-10-1959ರಲ್ಲಿ 8ವರ್ಷದವನಿದ್ದಾಗ ತೆಗೆದ ಫೋಟೋ
     ನಮ್ಮಪ್ಪ ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ಅವರಿಗೆ ವರ್ಗಾವಣೆಯಾದಾಗಲೆಲ್ಲಾ ಗಂಟು ಮೂಟೆ ಕಟ್ಟಿಕೊಂಡು ವರ್ಗಾವಣೆಯಾದ ಊರಿಗೆ ಹೋಗುತ್ತಿದ್ದೆವು. ಹಾಗಾಗಿ ನನ್ನ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಚಿಕ್ಕಮಗಳೂರಿನಲ್ಲಿ, ಮಾಧ್ಯಮಿಕ ಶಾಲೆ ಭದ್ರಾವತಿಯಲ್ಲಿ, ಹೈಸ್ಕೂಲು ಚಿತ್ರದುರ್ಗದಲ್ಲಿ, ಪಿ.ಯು.ಸಿ. ಚಿಕ್ಕಮಗಳೂರಿನಲ್ಲಿ ಆಯಿತು. ನಂತರದಲ್ಲಿ ಅವರಿಗೆ ನರಸಿಂಹರಾಜಪುರಕ್ಕೆ ವರ್ಗವಾದ್ದರಿಂದ ಮತ್ತು ಅಲ್ಲಿ ಕಾಲೇಜು ಇರದಿದ್ದರಿಂದ ಹಾಸನದಲ್ಲಿ ಒಂದು ಬಾಡಿಗೆ ಕೋಣೆಯಲ್ಲಿದ್ದು ಬಿ.ಎಸ್.ಸಿ.ಡಿಗ್ರಿ ಮುಗಿಸಿದೆ. ಹೈಸ್ಕೂಲಿನಲ್ಲಿ ಓದುವಾಗಲೂ ಚಡ್ಡಿ ಧರಿಸುತ್ತಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಪ್ರಥಮನಾಗಿ ತೇರ್ಗಡೆಯಾದಾಗ ಚಿತ್ರದುರ್ಗದ ಪುರಸಭೆಯವರು (ನಾನು ಓದಿದ್ದು ಮುನಿಸಿಪಲ್ ಹೈಸ್ಕೂಲಿನಲ್ಲಿ) ನನಗೆ ಹಾರ ಹಾಕಿ ೫೦ ರೂಪಾಯಿ ಬಹುಮಾನ ಕೊಟ್ಟಿದ್ದರು. ಹೈಸ್ಕೂಲಿನಲ್ಲಿ ಶಾಲಾ ಪ್ರತಿನಿಧಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾನು ನನ್ನ ಪ್ರತಿಸ್ಪರ್ಧಿ ಅಶೋಕನಿಗಿಂತ ಕೇವಲ ಒಂದು ಮತ ಹೆಚ್ಚು ಪಡೆದು ಆಯ್ಕೆಯಾಗಿದ್ದೆ. ನನಗೆ ೫೦ ಮತಗಳು, ಅಶೋಕನಿಗೆ ೪೯ ಮತಗಳು ಬಂದಿದ್ದವು. ೧೨ ಮತಗಳು ಇಬ್ಬರಿಗೂ ಒಟ್ಟಿಗೆ ಹಾಕಲ್ಪಟ್ಟಿದ್ದರಿಂದ ಕುಲಗೆಟ್ಟಿದ್ದವು. ವಿಶೇಷವೆಂದರೆ ನಾನು ನನ್ನ ಮತವನ್ನು ಅಶೋಕನಿಗೆ ಮತ್ತು ಅಶೋಕ ತನ್ನ ಮತವನ್ನು ನನಗೆ ಹಾಕಿದ್ದ! ಆಗ ಕ್ರೀಡಾಮನೋಭಾವ ಹೊಂದಿದ್ದ ನಾವುಗಳು ಚುನಾವಣೆ ನಂತರವೂ ಸ್ನೇಹಿತರಾಗೇ ಇದ್ದೆವು. ಈಗ ಅವನು ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಗೊತ್ತಿಲ್ಲ, ಚಿತ್ರದುರ್ಗ ಬಿಟ್ಟನಂತರ ಪರಸ್ಪರ ಇಬ್ಬರಿಗೂ ಸಂಪರ್ಕವೇ ಆಗಲಿಲ್ಲ.
1965ರಲ್ಲಿ 14 ವರ್ಷದವನಿದ್ದಾಗ ಹೈಸ್ಕೂಲಿನಲ್ಲಿ 'ತ್ರಿಬ್ಬಲ್ ತಾಳಿ' ನಾಟಕವಾಡಿದಾಗ ತೆಗೆದದ್ದು; ಕುರ್ಚಿಯಲ್ಲಿ ಕುಳಿತ ಮೊದಲನೆಯವನು ಅಶೋಕ; ನಾನು ಯಾರು ಊಹಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ