ಸುಮಾರು 1500 ವರ್ಷಗಳ ಹಿಂದೆ ಭಾರವಿ ಅನ್ನುವ ಒಬ್ಬ ದೊಡ್ಡ ವಿದ್ವಾಂಸ ಇದ್ದ. 'ಕಿರಾತಾರ್ಜುನೀಯ' ಎಂಬ ಪ್ರಸಿದ್ಧ ಸಂಸ್ಕೃತ ಕಾವ್ಯ ರಚಿಸಿದ್ದವನು. ಅವನ ಬಗ್ಗೆ ಒಂದು ಕಥೆಯಿದೆ, ಕೇಳು. ಅವನು ಚಿಕ್ಕವನಾಗಿದ್ದಾಗ ಅವನ ಅಪ್ಪ-ಅಮ್ಮ ಉಪನಯನ ಮಾಡಿ ಗುರುಕುಲಕ್ಕೆ ವಿದ್ಯಾಭ್ಯಾಸಕ್ಕೆ ಕಳಿಸಿದ್ದರು. ಗುರುಗಳಿಂದ ಎಲ್ಲಾ ವಿದ್ಯೆಗಳಲ್ಲೂ ಪಂಡಿತನಾಗಿ ವಾಪಸು ಬಂದಾಗ ಅವನ ಪಾಂಡಿತ್ಯ, ಕವಿತೆ ಬರೆಯುವ ಸಾಮರ್ಥ್ಯ ಕಂಡು ಊರವರೆಲ್ಲಾ ಅವನನ್ನು ಮೆಚ್ಚಿದ್ದರು. ಎಲ್ಲರೂ ಹೊಗಳುವವರೇ! ಎಲ್ಲರೂ ಹೊಗಳುತ್ತಿದ್ದರೂ ಭಾರವಿಯ ಅಪ್ಪ ಮಾತ್ರ ಸುಮ್ಮನಿರುತ್ತಿದ್ದರು. ಭಾರವಿಗೆ ಅಪ್ಪನಿಂದಲೂ ಹೊಗಳಿಸಿಕೊಳ್ಳಬೇಕು ಅಂತ ಆಸೆ. ಏನೇನೋ ಉಪಾಯ ಮಾಡಿ ಬರೆದಿದ್ದೆಲ್ಲವನ್ನೂ ಅಪ್ಪನ ಮುಂದೆ ಒಪ್ಪಿಸುತ್ತಿದ್ದ. ಎಲ್ಲಾ ಕೇಳುತ್ತಿದ್ದ ಅಪ್ಪ, 'ಇದೇನು ಮಹಾ, ಇನ್ನೂ ಚೆನ್ನಾಗಿ ಬರೆಯಬಹುದಿತ್ತು' ಎಂದುಬಿಡುತ್ತಿದ್ದ. ಹೀಗೆ ಅನೇಕ ಸಲ ಆಯಿತು. ಇಡೀ ಊರೇ ತನ್ನನ್ನು ಹೊಗಳುತ್ತಿದ್ದರೂ ಅಪ್ಪ ಮಾತ್ರ ಹಂಗಿಸುವುದನ್ನು ಕಂಡು ಕ್ರಮೇಣ ಭಾರವಿಗೆ ಅಪ್ಪನ ಮೇಲೆ ಸಿಟ್ಟು ಹೆಚ್ಚಾಗುತ್ತಾ ಹೋಯಿತು. ಇದು ಎಷ್ಟರ ಮಟ್ಟಿಗೆ ಹೋಯಿತು ಅಂದರೆ ಭಾರವಿ ಅಪ್ಪನನ್ನು ಕೊಂದೇಬಿಡಬೇಕು ಅಂದುಕೊಂಡ. ಒಂದು ರಾತ್ರಿ ಊಟ ಆದ ಮೇಲೆ ಅಟ್ಟದ ಮೇಲೆ ಕುಳಿತು ಅಪ್ಪ-ಅಮ್ಮ ಊಟ ಮಾಡಿ ಮಲಗುವುದನ್ನೇ ಕಾಯುತ್ತಿದ್ದ. ನಿದ್ದೆ ಮಾಡಿದ ಸಮಯದಲ್ಲಿ ಅಪ್ಪನನ್ನು ಕೊಲ್ಲಬೇಕು ಎಂಬುದು ಅವನ ಯೋಜನೆ. ಅಕಸ್ಮಾತ್ತಾಗಿ ಅವನಿಗೆ ಹತ್ತಿರದಲ್ಲಿದ್ದ ಒಂದು ತಾಳೆಗರಿ ಕಂಡಿತು. ಅದರಲ್ಲಿ, 'ಏನಾದರೂ ಕೆಟ್ಟ ಕೆಲಸ ಮಾಡಬೇಕಾದರೆ ಸಾವಿರ ಸಲ ಯೋಚಿಸು' ಎಂದು ಬರೆದಿತ್ತು. ಅಷ್ಟುಹೊತ್ತಿಗೆ ಅಪ್ಪ-ಅಮ್ಮ ಊಟ ಮುಗಿಸಿ ಎಲೆ-ಅಡಿಕೆ ಹಾಕಿಕೊಳ್ಳುತ್ತಾ ಮಾತನಾಡುತ್ತಿದ್ದುದನ್ನು ಭಾರವಿ ಕದ್ದು ಕೇಳಿಸಿಕೊಳ್ಳುತ್ತಿದ್ದ. ಅಮ್ಮ ಹೇಳುತ್ತಿದ್ದಳು, "ಭಾರವಿ ಅಷ್ಟೊಂದು ಬುದ್ಧಿವಂತ. ಎಲ್ಲರೂ ಅವನನ್ನು ಮೆಚ್ಚುತ್ತಾರೆ. ನೀವು ಮಾತ್ರ ಅವನನ್ನು ಮೂದಲಿಸುತ್ತಲೇ ಇರುತ್ತೀರಿ. ಅವನು ಬಹಳ ಬೇಜಾರು ಮಾಡಿಕೊಂಡಿದಾನೆ." ಅದಕ್ಕೆ ಅಪ್ಪ, "ನನಗೆ ಗೊತ್ತು, ಅವನು ತುಂಬಾ ಜಾಣ. ಅವನನ್ನು ಹೊಗಳಿದರೆ ತೃಪ್ತಿ ಆಗಿ ಸುಮ್ಮನಿದ್ದುಬಿಡ್ತಾನೆ. ನಾನು ಹೀಗೆ ಮಾಡಿದರೆ ಅವನು ಇನ್ನೂ ಹೆಚ್ಚು ಸಾಧನೆ ಮಾಡಿ ಇನ್ನೂ ಮುಂದೆ ಬರುತ್ತಾನೆ. ಅದೇ ನನ್ನ ಆಸೆ." ಇದನ್ನು ಕೇಳಿ ಭಾರವಿಗೆ ಅಳು ಬಂದುಬಿಟ್ಟಿತು. ಕೆಳಗೆ ಬಂದವನೇ ತನ್ನ ತಪ್ಪನ್ನು ಒಪ್ಪಿಕೊಂಡು ಅಪ್ಪನ ಕಾಲು ಹಿಡಿದು ಕ್ಷಮೆ ಕೇಳಿದ. ಮುಂದೆ ಅಪ್ಪ-ಅಮ್ಮರಿಗೆ ವಿಧೇಯನಾಗಿ ಹೆಚ್ಚಿನ ಸಾಧನೆ ಮಾಡಿ ಜಗತ್ಪ್ರಸಿದ್ಧನಾದ.
ನೋಡು, ನಿನಗೆ ಅಪ್ಪನೋ, ಅಮ್ಮನೋ, ಗುರುಗಳೋ, ಹಿರಿಯರೋ ಏನಕ್ಕಾದರೂ ಬೈದರೆ ಸಿಟ್ಟು ಮಾಡಿಕೋಬೇಡ. ಅವರು ಬೈಯುವುದು ನಿನಗೆ ಒಳ್ಳೆಯದಾಗಲಿ ಅಂತಲೇ ಹೊರತು ಮತ್ತೇನೂ ಅಲ್ಲ. ಹೌದೋ ಅಲ್ಲವೋ?
ನಿನ್ನ ಪ್ರೀತಿಯ ಮಾಮ,
ಕ.ವೆಂ.ನಾ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ