ಒಂದು ಸಂದರ್ಭವನ್ನು ಊಹಿಸಿಕೊಳ್ಳೋಣ. ಒಂದು ದಂತವೈದ್ಯರ ಕ್ಲಿನಿಕ್‌ನಲ್ಲಿ ವೈದ್ಯರನ್ನು ಕಾಣಲು ರೋಗಿಗಳು ತಮ್ಮ ಸರತಿಗಾಗಿ ಕಾಯುತ್ತಿದ್ದಾರೆ. ನೋವಿನ ಬಾಧೆಯಿಂದ ಎಲ್ಲರೂ ಮುಖ ಕಿವುಚಿ ಕುಳಿತಿದ್ದಾರೆ. ನರಳಾಟ ಬಿಟ್ಟರೆ ಬೇರೆ ಭಾವವಿಲ್ಲ. ಆಗ ಒಬ್ಬ ತಾಯಿ ತನ್ನ ಹಲ್ಲು ನೋವಿನ ಚಿಕಿತ್ಸೆ ಸಲುವಾಗಿ ತನ್ನ ಪುಟ್ಟ ಮಗುವಿನೊಂದಿಗೆ ಅಲ್ಲಿಗೆ ಬಂದು ಸಾಲಿನಲ್ಲಿ ಕೂರುತ್ತಾಳೆ. ಆ ಮಗು ತನ್ನ ಪಕ್ಕ ಕುಳಿತ ವೃದ್ಧ ರೋಗಿಯನ್ನು ಕುತೂಹಲದಿಂದ ನೋಡುತ್ತಾ 'ತಾತಾ' ಎನ್ನುತ್ತದೆ. ಆತ ಮಗುವನ್ನೊಮ್ಮೆ ನೋಡಿ ಪಕ್ಕಕ್ಕೆ ಮುಖ ತಿರುಗಿಸಿ ನರಳುತ್ತಾನೆ. ಮಗು ತಾಯಿಯ ತೊಡೆಯಿಂದ ಬಲವಂತವಾಗಿ ಇಳಿದು ಆ ವ್ಯಕ್ತಿಯ ಹತ್ತಿರ ಹೋಗಿ ಆತನನ್ನು ಮುಟ್ಟಿ ಕತ್ತೆತ್ತಿ ನೋಡುತ್ತಾ ಮತ್ತೆ 'ತಾತಾ' ಎಂದು ನಗುತ್ತದೆ. ಆತನಿಗೆ ಮಗುವನ್ನು ಮಾತನಾಡಿಸದೆ ಇರಲು ಸಾಧ್ಯವೇ ಇಲ್ಲ. ಆತ ನಗುತ್ತಾ 'ಏನು ಮಗು?' ಅನ್ನುತ್ತಾನೆ. ಮಗು ಚಪ್ಪಾಳೆ ತಟ್ಟಿ ನಗುತ್ತದೆ. ಇದನ್ನು ಗಮನಿಸುತ್ತಿದ್ದ ಇತರರೂ ಮಗುವಿನ ನಗುಮುಖದಿಂದ ಆಕರ್ಷಿತರಾಗಿ ಅದನ್ನು ಮಾತನಾಡಿಸಲು ಪ್ರಾರಂಭಿಸುತ್ತಾರೆ. ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಹೋಗುತ್ತಾ ಆಟವಾಡಿಕೊಂಡಿದ್ದ ಮಗುವಿನಿಂದ ಹತ್ತೇ ನಿಮಿಷದಲ್ಲಿ ಅಲ್ಲಿನ ವಾತಾವರಣವೇ ಬದಲಾಗುತ್ತದೆ. ಮಗುವಿನೊಂದಿಗೆ ಮಾತನಾಡುತ್ತಿದ್ದಾಗ ಅವರುಗಳಿಗೆ ನೋವಿನ ಅನುಭವವೇ ಆಗುತ್ತಿರಲಿಲ್ಲ. ಒಂದು ಮಗುವಿನ ನಿಷ್ಕಲ್ಮಶ ನಗು ಮಾಡಿದ ಪರಿವರ್ತನೆ ಅದಾಗಿತ್ತು. ಆ ಮಗುವಿಗೆ ಸಾಧ್ಯವಾಗಿದ್ದು ದೊಡ್ಡವರಿಗೆ ಏಕೆ ಆಗುವುದಿಲ್ಲ? ಏಕೆಂದರೆ ಮಗುವಿಗೆ ಚಿಕ್ಕವರು, ದೊಡ್ಡವರು, ಬಡವ, ಶ್ರೀಮಂತ, ಆ ಜಾತಿ, ಈ ಜಾತಿ, ಕರಿಯ, ಬಿಳಿಯ, ಇತ್ಯಾದಿ ಬೇಧ ಭಾವವಿರುವುದಿಲ್ಲ. ಮಕ್ಕಳಂತೆ ನಿಷ್ಕಲ್ಮಶ ನಗು ದೊಡ್ಡವರಿಗೆ ಬರಲು ಕಷ್ಟ. ಆದರೆ ಸಾಧ್ಯವಾದಷ್ಟು ನಗುನಗುತ್ತಾ ಮಾತನಾಡುವ ವ್ಯಕ್ತಿಗಳು ಎಲ್ಲರಿಗೂ ಇಷ್ಟವಾಗುತ್ತಾರೆ.
*************
-ಕ.ವೆಂ.ನಾಗರಾಜ್.