ನೋವಿನಲ್ಲಿ ನಲಿವು
ದುಃಖದಲ್ಲಿದ್ದಾಗ, ಕಷ್ಟದಲ್ಲಿದ್ದಾಗ ಸ್ಪಂದಿಸುವವರನ್ನು ನೆನೆಸಿಕೊಳ್ಳಬೇಕು. ಸುಖವಾಗಿದ್ದಾಗ, ಸಮೃದ್ಧಿಯಾಗಿದ್ದಾಗ ಜೊತೆಗಿದ್ದವರೆಲ್ಲಾ ನಮ್ಮ ಕಷ್ಟಕ್ಕೆ, ದುಃಖಕ್ಕೆ ಸ್ಪಂದಿಸುತ್ತಾರೆಂದು ಹೇಳುವಂತಿಲ್ಲ. ಪ್ರತಿಯೊಬ್ಬರಲ್ಲೂ ಒಳ್ಳೆಯ, ಕೆಟ್ಟ ಗುಣಗಳು ಇರುತ್ತವೆ. ಒಳ್ಳೆಯ ಗುಣಗಳು ಹೊರಹೊಮ್ಮಿದಾಗ ಮಾತ್ರ ಅವರು ನಮಗೆ ಪ್ರಿಯರಾಗುತ್ತಾರೆ. ಇತ್ತೀಚಿನ ಎರಡು ಘಟನೆಗಳು ನನಗೆ ನೆನಪಿಗೆ ಬರುತ್ತಲೇ ಇರುತ್ತವೆ.
ಘಟನೆ -೧:
ಚಿಂತಿಸಬೇಡಿ, ನಾನು ನಿಮ್ಮೊಂದಿಗಿದ್ದೇನೆ!
ಅಂದು ನನ್ನ ಮನಸ್ಸಿಗೆ ನೋವಾಗುವಂತಹ ಘಟನೆ ನಡೆದಿತ್ತು. ಅದನ್ನು ತಪ್ಪಿಸಲಾಗಲೀ, ತಡೆಯಲಾಗಲೀ ನನಗೆ ಆಗಿರಲಿಲ್ಲ. ನನ್ನ ಕೈಮೀರಿದ ವಿಷಯವಾಗಿದ್ದರೂ ವೈಯಕ್ತಿಕವಾಗಿ ನನ್ನ ತಪ್ಪಿಲ್ಲದಿದ್ದರೂ ಅಂತಹ ಪ್ರಸಂಗಕ್ಕೆ ನಾನು ಹೊಣೆ ಹೊರಬೇಕಿತ್ತು. ದೂಷಿಸಲು ಯಾರಾದರೂ ಬೇಕಿತ್ತು. ಅದು ನಾನೇ ಅಗುವ ಎಲ್ಲಾ ಸಂಭವವೂ ಇತ್ತು. ನನಗೆ ತಡೆಯಲಾಗದಷ್ಟು ದುಃಖವಾಗಿತ್ತು. ಯಾರಿಗೂ ಕಾಣದಂತೆ ಹೊರಗೆ ಹೋಗಿ ಗಿಡದ ಮರೆಯಲ್ಲಿ ನಿಂತು ಕಣ್ಣು ಒರೆಸಿಕೊಳ್ಳುತ್ತಿದ್ದೆ. ನನ್ನ ತಮ್ಮನ ಮಗ ಅದನ್ನು ಗಮನಿಸಿ (ಬಹುಷಃ ಆತ ನನ್ನನ್ನು ಮೊದಲಿನಿಂದ ಗಮನಿಸುತ್ತಿದ್ದಿರಬೇಕು) "ದೊಡ್ಡಪ್ಪ, ಬನ್ನಿ, ಕರೆಯುತ್ತಿದ್ದಾರೆ"ಎಂದು ಕರೆದ. ಯಾರೂ ನನ್ನನ್ನು ಕರೆದಿರಲಿಲ್ಲ. ಅವನು ಅಂದು ಸಾಯಂಕಾಲ ನನ್ನನ್ನು ಕಾರಿನಲ್ಲಿ ಬಸ್ ನಿಲ್ದಾಣಕ್ಕೆ ಬಿಡಲು ಬಂದವನು ನಾನು ಮೌನವಾಗಿದ್ದುದನ್ನು ಗಮನಿಸಿ ನನ್ನ ತೊಡೆಯ ಮೇಲೆ ಕೈಯಿಟ್ಟು "ದೊಡ್ಡಪ್ಪ, ಚಿಂತೆ ಮಾಡಬೇಡಿ, ನಾನು ನಿಮ್ಮೊಂದಿಗಿದ್ದೇನೆ" ಎಂದು ಹೇಳಿದ್ದು ಅವನ ಹೃದಯದಿಂದ ಬಂದ ಮಾತಾಗಿತ್ತು. ಬಿರುಬೇಸಿಗೆಯ ಬಿಸಿಲಿನ ಝಳದಿಂದ ತತ್ತರಿಸಿ ಗಂಟಲು ಒಣಗಿದ್ದವನಿಗೆ ಶೀತಲ ತಂಗಾಳಿ ಸೋಕಿದ ಅನುಭವವಾಗಿತ್ತು. ಕಣ್ಣಂಚಿನಿಂದ ಜಿನುಗಿದ ನೀರು ಒರೆಸಿಕೊಂಡೆ.
ಘಟನೆ -೨:
ಸಮಾಧಾನ ಮಾಡಿಕೋ, ತಾತ!
ಬೆಂಗಳೂರಿನಲ್ಲಿ ಎಲ್.ಕೆ.ಜಿ.ಯಲ್ಲಿ ಓದುತ್ತಿರುವ ನಾಲ್ಕು ವರ್ಷದ ನನ್ನ ಮೊಮ್ಮಗಳು ಅಕ್ಷಯಳಿಗೆ ದಸರಾ ರಜ ಬಂದಾಗ ಕೆಲವು ದಿನ ನಮ್ಮೊಡನೆ ಇರಲಿ ಎಂದು ಹಾಸನಕ್ಕೆ ಕರೆದುಕೊಂಡು ಬಂದಿದ್ದೆ. ಅವಳಿಗೂ ಖುಷಿಯಾಗಿತ್ತು. ದಿನ ಕಳೆದಿದ್ದೇ ಗೊತ್ತಾಗುತ್ತಿರಲಿಲ್ಲ. ದಿನವೆಲ್ಲಾ ಅವಳೊಂದಿಗೆ ಆಡಬೇಕು, ರಾತ್ರಿ ಮಲಗುವ ಮುನ್ನ ೩-೪ ಕಥೆಗಳನ್ನಾದರೂ ಹೇಳಬೇಕು, ಆನಂತರವೇ ಅವಳು ಮಲಗುತ್ತಿದ್ದುದು. ನನಗೆ ಆಗಾಗ್ಗೆ ಮಧ್ಯರಾತ್ರಿಯಲ್ಲಿ ಉಸಿರಾಟದ ತೊಂದರೆ ಉಂಟಾಗುತ್ತಿತ್ತು. ಗಂಟಲಿನ ಹತ್ತಿರ ತಡೆಯುಂಟಾಗಿ ಉಸಿರನ್ನು ಒಳಕ್ಕೆ ಎಳೆದುಕೊಳ್ಳುವುದು, ಬಿಡುವುದಕ್ಕೆ ಹರಸಾಹಸ ಪಡಬೇಕಾಗುತ್ತಿತ್ತು. ಹೀಗಾದಾಗ ಧಡಕ್ಕನೆ ಎಚ್ಚರವಾಗಿ ಪರದಾಡಿಬಿಡುತ್ತಿದ್ದೆ. ಗಡಬಡಿಸಿ ಓಡಾಡುವುದು, ಹಾಗೂ ಹೀಗೂ ಸ್ವಲ್ಪ ಗಾಳಿ ಒಳಕ್ಕೆ ಹೋದಾಗ ಸುಧಾರಿಸಿಕೊಂಡು ನೀರು ಕುಡಿಯುವುದು, ಮೈಮೇಲಿನ ಷರ್ಟು, ಬನಿಯನ್‌ಗಳನ್ನು ಕಳಚಿ ಹಾಕಿ, ಎದೆ, ಗಂಟಲುಗಳಿಗೆ ವಿಕ್ಸ್ ಹಚ್ಚಿಕೊಂಡು ಹತ್ತು ನಿಮಿಷ ಜೋರಾಗಿ ಫ್ಯಾನು ಹಾಕಿಕೊಂಡು ಓಡಾಡಿದ ನಂತರ ಸಮಾಧಾನವಾಗಿ ಮಲಗಲು ಸಾಧ್ಯವಾಗುತ್ತಿತ್ತು. ಒರಗು ದಿಂಬು ಇಟ್ಟುಕೊಂಡು ಒರಗಿ ಕುಳಿತುಕೊಂಡ ಸ್ಥಿತಿಯಲ್ಲಿ ಮಲಗುತ್ತಿದ್ದೆ. ಒಂದು ದಿನ ನನ್ನ ಅಂತ್ಯ ಹೀಗೇ ಆಗುತ್ತದೆಯೇನೋ ಎಂದು ಎಷ್ಟೋ ಸಲ ನನಗೆ ಅನ್ನಿಸುತ್ತಿತ್ತು, ಮೊಮ್ಮಗಳು ಬಂದು ನಾಲ್ಕು ದಿನವಾಗಿತ್ತು. ಅಂದು ರಾತ್ರಿ ಕಥೆ ಕೇಳಿ ಅವಳು ಮಲಗಿದಾಗ ರಾತ್ರಿ ಹನ್ನೊಂದು ಹೊಡೆದಿತ್ತು. ರಾತ್ರಿ ಸುಮಾರು ೧೨-೩೦ರ ಹೊತ್ತಿಗೆ ನನಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಧಡಕ್ಕನೆ ಎದ್ದ ರಭಸಕ್ಕೆ ನನ್ನ ಪಕ್ಕ ಮಲಗಿದ್ದ ಮೊಮ್ಮಗಳಿಗೂ ಎಚ್ಚರವಾಯಿತು. ನನ್ನ ಪತ್ನಿ ಮೊಮ್ಮಗಳ ಆಟ, ಊಟಗಳ ಜೊತೆಗೆ ಹಬ್ಬದ ಕೆಲಸ, ಮನೆಕೆಲಸ ಕಾರ್ಯಗಳನ್ನೂ ಮಾಡಿ ಸುಸ್ತಾಗಿ ಮಲಗಿದ್ದು ಅವಳಿಗೆ ಎಚ್ಚರವಾಗಲಿಲ್ಲ. ಮೊಮ್ಮಗಳು ಎದ್ದು ಕುಳಿತು "ಏನಾಯಿತು, ತಾತ, ಸಮಾಧಾನ ಮಾಡಿಕೋ ತಾತ, ನೀರು ಕೊಡಲಾ, ಹಾಲು ಕುಡೀತೀಯಾ" ಎಂದು ವಿಚಾರಿಸಿದಾಗ ನನಗೆ ಹೃದಯ ತುಂಬಿ ಬಂತು. ಎದ್ದಿದ್ದ ರಭಸಕ್ಕೆ ನನಗೆ ಸ್ವಲ್ಪ ಉಸಿರಾಡಲು ಅನುಕೂಲವಾಯಿತು. ಇಟ್ಟುಕೊಂಡಿದ್ದ ನೀರು ಕುಡಿದೆ. ಮೊಮ್ಮಗಳು ನನ್ನ ಎದೆ, ಬೆನ್ನು ಸವರುತ್ತಿದ್ದಳು. ಅವಳನ್ನು ಬಾಚಿ ತಬ್ಬಿಕೊಂಡೆ. ಅವಳೂ ನನ್ನ ತಲೆ ಸವರಿ ನನ್ನ ಕೆನ್ನೆಗೆ ಮುತ್ತು ಕೊಟ್ಟಾಗ ನಾನು ನಿಜಕ್ಕೂ ಧನ್ಯನಾಗಿದ್ದೆ. ನನಗೆ ಸಮಾಧಾನವಾಗಿತ್ತು. ನಾನು ದಿಂಬಿಗೆ ಒರಗಿದಂತೆ ಮಲಗಿದಾಗ ಅವಳೂ ನನ್ನನ್ನು ಒರಗಿಕೊಂಡೇ ನಿದ್ದೆ ಮಾಡಿದ್ದಳು. ಏನೂ ಅರಿಯದ ನಾಲ್ಕು ವರ್ಷದ ಪುಟಾಣಿ ತೋರಿದ ಮಮತೆಯನ್ನು ನಾನು ಹೇಗೆ ಮರೆಯಲಿ?
[ಇದು 22-02-2011ರಂದು 'ಕವಿಮನ' ತಾಣದಲ್ಲಿ ಪ್ರಕಟಿಸಿದ ಬರಹ].
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ